ಪಿಎಸ್ ಐ ನೇಮಕಾತಿ ಅಕ್ರಮ: ಅಭ್ಯರ್ಥಿಗಳಿಗೆ ಸಿಐಡಿ ಡ್ರಿಲ್, ಕಿಂಗ್ ಪಿನ್ ದಿವ್ಯಾಗೆ ತೀವ್ರ ಶೋಧ

Prasthutha|

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ ಐ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.

- Advertisement -

ನಗರದ ಅರಮನೆ ರಸ್ತೆಯ ಕಾರ್ಲ್‌ಟನ್ ಭವನದ ಸಿಐಡಿ ಕಚೇರಿಗೆ ಹಾಜರಾಗುವಂತೆ ಈಗಾಗಲೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿನ 50 ಅಭ್ಯರ್ಥಿಗಳಿಗೆ ನೋಟೀ‌ಸ್ ಜಾರಿ‌ಮಾಡಲಾಗಿದ್ದು ಅದರಂತೆ ಹಾಜರಾದ ಅಭ್ಯರ್ಥಿಗಳಿಗೆ ಒಬ್ಬರ ನಂತರ ಒಬ್ಬರಂತೆ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ.

ಸಿಐಡಿ ಡಿವೈಎಸ್ಪಿ ಪಿ.ನರಸಿಂಹಮೂರ್ತಿ ಅವರು ತನಿಖಾ ತಂಡದ ಜೊತೆ ವಿಚಾರಣೆ ನಡೆಸಿ ವಿಚಾರಣೆಗೆ ಬರುವಾಗ ಹಾಲ್ ಟಿಕೆಟ್ ನ ಮೂಲಪ್ರತಿ ಹಾಗೂ ಪರೀಕ್ಷೆಯ ದಿನ ತೆಗೆದುಕೊಂಡ ಒಎಂಆರ್ ಶೀಟ್ ನ ಕಾರ್ಬನ್ ಪ್ರತಿ (ಕ್ಯಾಂಡಿಡೇಟ್ಸ್ ಕಾಪಿ) ಪರಿಶೀಲನೆ ನಡೆಸಿ ವಿಚಾರಣೆಯನ್ನು ಕೈಗೊಂಡಿದ್ದಾರೆ.

- Advertisement -

ಈ ನಡುವೆ ಪ್ರಕರಣದ ಆರು ಮಂದಿ ಬಂಧಿತರ ಸಿಐಡಿ ವಶದ ಅವಧಿಯು ಇಂದಿಗೆ ಮುಗಿಯಲಿದ್ದು ಮತ್ತಷ್ಟು ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸ ತೊಡಗಿದ್ದಾರೆ.

ಕಳೆದ ಏ.16 ರಂದು ಮೂವರು ಅಭ್ಯರ್ಥಿಗಳು ಮತ್ತು ಮೂವರು ಕೊಠಡಿ ಮೇಲ್ವಿಚಾರಕಿಯರು ಸೇರಿ ಆರು ಮಂದಿಯನ್ನು ಬಂಧಿಸಿ ಮರು ದಿನ ಕೋರ್ಟ್ ಗೆ ಹಾಜರು ಪಡಿಸಿ ಮತ್ತೆ ವಿಚಾರಣೆ ನಡೆಸಲಾಗಿತ್ತು. ಮೂರು ದಿನಗಳ ಸಿಐಡಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.

ಕಳೆದ ಎರಡು ದಿನಗಳಿಂದ ಬಂಧಿತರಿಂದ ಸಾಕಷ್ಟು ಮಾಹಿತಿ ಪಡೆದಿರುವ ಅಧಿಕಾರಿಗಳು  ಅಕ್ರಮ ಹೇಗಾಗಿದೆ, ಯಾರು ಯಾರು ಇದ್ದಾರೆ, ಯಾರಿಗೆ ಹಣ ನೀಡಲಾಗಿದೆ ಎನ್ನುವುದು ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಬಂಧಿತರು ಕಲಬುರಗಿ ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯ ಕೊಠಡಿ ಮೇಲ್ವಿಚಾರಕರು ಮತ್ತು ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು. ಹೀಗಾಗಿ ಈ ಆರು ಜನರ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಅಕ್ರಮದಲ್ಲಿ ಭಾಗಿಯಾಗಿರುವ ಅನೇಕರನ್ನು ವಿಚಾರಣೆಗೊಳಪಡಿಸಲು ಸಿಐಡಿ ಸಿದ್ಧತೆ ಮಾಡಿಕೊಂಡಿದೆ.

ಕಿಂಗ್‌ಪಿನ್ ದಿವ್ಯಾ:

ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ್ ಸೂಚನೆಯಂತೆ ನಾವು ಅಭ್ಯರ್ಥಿಗಳ ಓಎಂಆರ್ ಶೀಟ್ ಭರ್ತಿ ಮಾಡಿದೆವು ಎಂದು  ಬಂಧಿತ ಪರೀಕ್ಷಾ ಮೇಲ್ವಿಚಾರಕರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆದರೆ ಇದುವರೆಗೂ ಕಾಶೀನಾಥ್ ಹಾಗೂ ಶಾಲೆಯ ಕಾರ್ಯದರ್ಶಿ ದಿವ್ಯಾ ಪತ್ತೆಯಾಗಿಲ್ಲ.

 ಪ್ರಕರಣ ಬೆಳಕಿಗೆ ಬಂದು ಕಳೆದ ಆರು ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು ಆಕೆಗಾಗಿ ನೆರೆಯ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಹುಡುಕಾಟ ನಡೆದಿದೆ.

ಇದಲ್ಲದೆ ಮುಖ್ಯೋಪಾಧ್ಯಾಯ ಕಾಶಿನಾಥ್ ಜೊತೆ ಇನ್ನಿಬ್ಬರು ಸಿಬ್ಬಂದಿ ಕೂಡಾ ನಾಪತ್ತೆಯಾಗಿದ್ದಾರೆ. ಒಂದೇ ಕಡೆ ಐವರು ಇರುವ ಶಂಕೆ ಇದ್ದು ಸಿಐಡಿ ತಂಡ ಶೋಧ  ನಡೆಸಿದೆ. ಲಕ್ಷಾಂತರ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದ ಕಿಂಗ್ ಪಿನ್ ಗಳು ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಕೇವಲ ನಾಲ್ಕು ಸಾವಿರ ಮಾತ್ರ ನೀಡಿದ್ದಾರೆ.

ಮುಖ್ಯೋಪಾಧ್ಯಾಯ ಕಾಶಿನಾಥ್ ಕೊಠಡಿ ಮೇಲ್ವಿಚಾರಕಿಯರಿಗೆ ತಲಾ 4 ಸಾವಿರ ನೀಡಿದ್ದರು. ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿದ್ದೀರಾ ಅದಕ್ಕಾಗಿ ನಾಲ್ಕು ಸಾವಿರ ಹಣ ನೀಡುತ್ತಿದ್ದೇವೆ. ದಿವ್ಯಾ ಹಾಗರಗಿ ಮೇಡಂ ನೀಡಲು ಹೇಳಿದ್ದಾರೆ ಎಂದು ಕಾಶಿನಾಥ್ ಹಣ ನೀಡಿದ್ದರು ಎಂಬುವುದು ತಿಳಿದು ಬಂದಿದೆ.

40 ರಿಂದ 80 ಲಕ್ಷ:

ಯಾರಿಗೂ ಅನುಮಾನ ಬಾರದಿರಲಿ ಎನ್ನುವ ಕಾರಣಕ್ಕೆ ಪರೀಕ್ಷಾ ಕೆಲಸದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ತಲಾ ನಾಲ್ಕು ಸಾವಿರ ನೀಡಲಾಗಿತ್ತು. ಇಲಾಖೆ ಪರೀಕ್ಷಾ ಕೆಲಸಕ್ಕೆ ನೀಡುವ ಹಣದ ಜೊತೆಗೆ ಹೆಚ್ಚುವರಿ ನಾಲ್ಕು ಸಾವಿರ ನೀಡಲಾಗಿತ್ತು. ಒಬ್ಬೊಬ್ಬ ಅಭ್ಯರ್ಥಿಯಿಂದ 40 ರಿಂದ 80 ಲಕ್ಷಕ್ಕೆ ಡೀಲ್ ಮಾಡಿದ್ದ ಕಿಂಗ್ ಪಿನ್ ಗಳು ನಾಲ್ಕು ಸಾವಿರ ಜೊತೆ ಮತ್ತೆ ಹಣ ನೀಡಿರುವ ಶಂಕೆಯ ಮೇಲೆ ವಿಚಾರಣೆ ನಡೆಸಲಾಗುತ್ತಿದೆ



Join Whatsapp