ಬಡವರ ಚಿನ್ನ ಫೈನಾನ್ಸ್ ನಲ್ಲಿಟ್ಟು ಹಣ ಪಡೆಯುತ್ತಿದ್ದ ಟಿಎಪಿಸಿಎಂಎಸ್ ಸೊಸೈಟಿ ವ್ಯವಸ್ಥಾಪಕ ಬಂಧನ

Prasthutha|

ಬೆಂಗಳೂರು: ಹಣಕಾಸಿನ ಸಮಸ್ಯೆಯ ಹಿನ್ನೆಲೆಯಲ್ಲಿ ಬಡವರು ಅಡಮಾನವಿಟ್ಟ ಚಿನ್ನಾಭರಣಗಳನ್ನು ಖಾಸಗಿ ಫೈನಾನ್ಸ್ ಗಳಲ್ಲಿ ಇಟ್ಟು ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದ ಕನಕಪುರದ ಟಿಎಪಿಸಿಎಂಎಸ್ ಸೊಸೈಟಿಯ ವ್ಯವಸ್ಥಾಪಕನನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಕನಕಪುರದ ಟಿಎಪಿಸಿಎಂಎಸ್ ಸೊಸೈಟಿಯ ವ್ಯವಸ್ಥಾಪಕ ಗೋವಿಂದಪ್ಪ ಬಂಧಿತ ಆರೋಪಿ. ಆತ 8 ಕೆ.ಜಿ 534 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

ಟಿಎಪಿಸಿಎಂಎಸ್ ಖಾಸಗಿ ಸಹಕಾರ ಬ್ಯಾಂಕ್ ಕನಕಪುರ ತಾಲೂಕಿನ ಮರಳವಾಡಿ ಗ್ರಾಮದ ಸರ್ಕಲ್ ಬಳಿಯ ವಸಂತಬಾಯಿರವರ ಬಿಲ್ಡಿಂಗ್ ನಲ್ಲಿ ಆರ್ಥಿಕ ವ್ಯವಹಾರ ವಿಭಾಗದ ಶಾಖೆಯನ್ನು ಹೊಂದಿದೆ. ಈ ಸದರಿ ಶಾಖೆಗೆ ಆರೋಪಿ ಗೋವಿಂದಪ್ಪ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

- Advertisement -

ಮರಳವಾಡಿ ಗ್ರಾಮದ ವೆಂಕಟೇಶ್ ಎಂಬುವವರು ಇದೇ ಸಹಕಾರ ಬ್ಯಾಂಕ್ ನಲ್ಲಿ ಇಟ್ಟಿದ್ದ ಚಿನ್ನಭರಣಕ್ಕೆ ಕಳೆದ ಮಾ.16ರಂದು ಒಡವೆ ಹಣವನ್ನು ಸಂಪೂರ್ಣವಾಗಿ ಕಟ್ಟಿದ್ದರು. ಆದರೆ ಅವರಿಗೆ ಅವರ ಒಡವೆಯನ್ನು ಕೊಟ್ಟಿರಲಿಲ್ಲ. ಅಂದು ವೆಂಕಟೇಶ್ ಇಟ್ಟಿದ್ದ 68 ಗ್ರಾಂ 700 ಮಿಲಿ ಚಿನ್ನವನ್ನ ಕೇಳಿದಾಗ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಈ ಸಂಬಂಧ ಮಾ. 25ರಂದು ಕನಕಪುರದ ಟಿಎಪಿಸಿಎಂಸಿಎಸ್ ಸೊಸೈಟಿ ಕನಕಪುರ ಮುಖ್ಯ ಕಾರ್ಯದರ್ಶಿ  ನದಿಂ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನ ವಿರುದ್ಧ ತೀವ್ರ ತನಿಖೆ ನಡೆಸಿದ್ದಾರೆ. ಆಗ ಈತನ ಒಂದೊಂದೇ ಪ್ರಕರಣಗಳು ಬಯಲಾಗುತ್ತಾ ಹೋಗಿವೆ. ಇದಲ್ಲದೇ ಈತ ಸೊಸೈಟಿಯಲ್ಲಿ ಇತರೆ ಸುಮಾರು 267 ಗ್ರಾಹಕರ ಒಡವೆಯನ್ನು ಹಣದಾಸೆಗಾಗಿ ಇತರೆ ಖಾಸಗಿ ಫೈನಾನ್ಸ್ ನಲ್ಲಿ ಅಡಮಾನ ಇಟ್ಟು ಹೆಚ್ಚಿಗೆ ದುಡ್ಡು ಪಡೆದುಕೊಂಡಿರುವುದು ತನಿಖೆಯಿಂದ ಬಯಲಾಗಿದೆ.

ಸಾರ್ವಜನಿಕರು ಸೊಸೈಟಿಯಲ್ಲಿ ಇಟ್ಟ ಚಿನ್ನಾಭರಣಗಳನ್ನು ಈತ ಕನಕಪುರದ ಮಣಪ್ಪುರಂ, ಮುತ್ತೂಟ್ ಫೈನಾನ್ಸ್, ಮುತ್ತೂಟ್ ಫಿನ್ ಕಾರ್ಫ್, ಐಐಎಫ್ಎಲ್ ಹಾಗೂ ರಾಮದೇವ್ ಬ್ಯಾಂಕರ್ಸ್ ಮತ್ತು ಹಾರೋ‌ಹಳ್ಳಿ ಮುತ್ತೂಟ್ ಫಿನ್ ಕಾರ್ಫ್, ಸಾತನೂರಿನ ಮುತ್ತೂಟ್ ಫೈನಾನ್ಸ್ ಗಳಲ್ಲಿ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದಾನೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಯು 8 ಕೆ.ಜಿ 534 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಡಮಾನ ಇಟ್ಟು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾನೆ.

ನಿಯಮದ ಪ್ರಕಾರ ಸಾರ್ವಜನಿಕರು ಅಡಮಾನವಿಟ್ಟ ಆಭರಣಗಳನ್ನು ‘ಕನಕಪುರ ಟೌನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಾಕರ್’ ನಲ್ಲಿ ಇಡಬೇಕು. ಆದರೆ ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡ ಗೋವಿಂದಪ್ಪ ಸಂಸ್ಥೆಗೆ ಯಾವುದೇ ಮಾಹಿತಿಯನ್ನು ನೀಡದೆ ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚಿಸಿದ್ದಾರೆ. ಚಿನ್ನಾಭರಣ ತೆಗೆದುಕೊಂಡು ಹೋಗಿ ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದ ಆರೋಪ ಈತನ ಮೇಲಿದೆ. ಈ ಹಿನ್ನೆಲೆ ಗೋವಿಂದಪ್ಪ ಹಾಗೂ ಇದಕ್ಕೆ ಸಹಕರಿಸಿದವರ ಮೇಲೆ ಕಾನೂನು ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 380, 403, 406, 409, 420 ಹಾಗೂ 34ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬಂಧಿತ ಆರೋಪಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಹಾಗೂ ರಿಯಲ್ ಎಸ್ಟೇಟ್ ಗೆ ಹಣ ತೊಡಗಿಸಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಅಡಮಾನ ಇಟ್ಟಿದ್ದ ಸಾರ್ವಜನಿಕರ ಒಡವೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp