ಚಿಕ್ಕಮಗಳೂರು: ಮಹಿಳೆಗೆ ಕರೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ಠಾಣೆಗೆ ಕರೆದೊಯ್ದು ಪರಿಶಿಷ್ಟ ಸಮುದಾಯದ ಯುವಕನೊಬ್ಬನಿಗೆ ಮೂತ್ರ ನೆಕ್ಕಿಸಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಅವರನ್ನು CID ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಠಾಣೆಗೆ ಕರೆದೊಯ್ದು ಥಳಿಸಿ ವ್ಯಕ್ತಿಯೊಬ್ಬರಿಂದ ತನ್ನ ಬಾಯಿಗೆ ಮೂತ್ರ ಹೊಯ್ಯಿಸಿ ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನೂ ನೆಕ್ಕಿಸಿದ್ದರು ಎಂದು ಆರೋಪಿಸಿ ಮೂಡಿಗೆರೆ ತಾಲೂಕಿನ ಕಿರಗುಂದದ ಯುವಕ ಕೆ.ಎಲ್. ಪುನೀತ್, ಗೊಣಿಬೀಡು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ PSI ಅರ್ಜುನ್ ವಿರುದ್ಧ FIR ದಾಖಲಾಗಿತ್ತು.
ಮೇ 10 ರಂದು ಈ ಪ್ರಕರಣ ನಡೆದಿದ್ದು, PSI ವಿರುದ್ದ ಮೇ 22 ರಂದು ದೂರು ದಾಖಲಾಗಿತ್ತು . ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅರ್ಜುನ್, ನಿರೀಕ್ಷಣಾ ಜಾಮೀನು ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶ ಕೆ.ಎಲ್.ಅಶೋಕ್ ವಜಾಗೊಳಿಸಿದ್ದರು.
ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಡಿಜಿಪಿ ಬಿ.ಎಸ್.ಸಂಧು ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದ ಎಸ್ಪಿ ರವಿ ಚನ್ನಣ್ಣನವರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.