ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

Prasthutha|

ಮಡಿಕೇರಿ: ರಾಜ್ಯ ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಕಾಯ್ದೆಯನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

- Advertisement -

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್ ಮಾತನಾಡಿ, ದೇಶದ ಅಲ್ಪಸಂಖ್ಯಾತರು ಎಲ್ಲರೊಂದಿಗೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತ ಸಮುದಾಯದ ಚರ್ಚ್ ಗಳು, ಪಾದ್ರಿಗಳು ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ಕೆಲ ಮತೀಯ ದುಷ್ಕರ್ಮಿಗಳು ನಿರಂತವಾಗಿ ದಾಳಿ ಮಾಡುತ್ತಿದ್ದಾರೆ. ದ್ವೇಷ ಬಿತ್ತುವ ಭಾಷಣಗಳನ್ನು ಮಾಡಿ ರಾಷ್ಟ್ರದ ಏಕತೆಗೆ ಧಕ್ಕೆ ತರುವಂತ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

- Advertisement -

ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಬೇಕು, ಚರ್ಚ್ ಗಳಿಗೆ ಭದ್ರತೆ ನೀಡಬೇಕು, ಯೇಸುಕ್ರಿಸ್ತರ ಪ್ರತಿಮೆಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ಧ ಗೂಂಡ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಬೇಕು ಎಂದು  ಒತ್ತಾಯಿಸಿದರು.

ಇನ್ನೂ ಕಾಯ್ದೆಯನ್ನು ವಾಪಸ್ ಪಡೆಯದಿದ್ದರೆ ಮತ್ತು ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಉಸ್ಮಾನ್ ಎಚ್ಚರಿಕೆ ನೀಡಿದರು.



Join Whatsapp