15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕಾ ಅಭಿಯಾನಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಚಾಲನೆ

Prasthutha|

ಮಡಿಕೇರಿ: ಜಿಲ್ಲೆಯಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಅಭಿಯಾನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಾಲಿಬೆಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿಯ ಮಹಿಳಾ ಸಮಾಜದಲ್ಲಿ ಚಾಲನೆ ನೀಡಿದರು.

- Advertisement -

ಬಳಿಕ ಮಾತನಾಡಿದ ಸಚಿವರು, ಕೊಡಗು ಜಿಲ್ಲೆ ಕೋವಿಡ್ ಲಸಿಕೆ ಪಡೆಯುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಹೊಂದಿದೆ. ಪ್ರಥಮ ಡೋಸ್ ಪಡೆದವರಲ್ಲಿ ಶೇ.100 ಕ್ಕಿಂತ ಹೆಚ್ಚು ಹಾಗೂ ದ್ವಿತೀಯ ಡೋಸ್ ಪಡೆದವರಲ್ಲಿ ಶೇ.94 ರಷ್ಟು ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

 ಭಾರತ ಸರ್ಕಾರದಿಂದ ಲಸಿಕಾ ಅಭಿಯಾನ ಜಾರಿಗೊಳಿಸಿದ್ದು, ಅರ್ಹರೆಲ್ಲರೂ ಲಸಿಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಶಾಲಾ-ಕಾಲೇಜುಗಳಲ್ಲಿ ಅಥವಾ ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಗುರುತಿನ ಚೀಟಿ ಬಳಸಿ ಲಸಿಕೆ ಕೇಂದ್ರದಲ್ಲಿ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಲಾಗುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

- Advertisement -

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ರಾಷ್ಟ್ರದಲ್ಲಿ ಮೂರನೇ ಅಲೆ ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ತಡೆಯಲು ಅರ್ಹರೆಲ್ಲರೂ ಕೋವಿಡ್ ನಿಯಂತ್ರಣ ಲಸಿಕೆ ಪಡೆಯುವಂತಾಗಬೇಕು ಎಂದು ಅವರು ಕೋರಿದರು.

ಕೋವಿಡ್-19 ನಿಯಂತ್ರಿಸುವಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್-19೯ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ  ತಿಳಿಸಿದರು.

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ರಾಜ್ಯ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರ ಕಾಲ ಕಾಲಕ್ಕೆ ಜಾರಿ ಮಾಡುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಿದರು.   ಜಿಲ್ಲೆಯಲ್ಲಿ 15 ರಿಂದ 18 ವರ್ಷ ವಯಸ್ಸಿನ  26,049 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್.ವೆಂಕಟೇಶ್ ಅವರು ಮಾಹಿತಿ ನೀಡಿದರು. 

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಡಿಎಚ್ಒ ಡಾ.ಆರ್.ವೆಂಕಟೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಯತಿರಾಜು ಇತರರು ಇದ್ದರು.

Join Whatsapp