ನವದೆಹಲಿ: ಬಿಜೆಪಿ ನಾಯಕಿಯ ಪ್ರವಾದಿ ನಿಂದನೆ ವಿರುದ್ಧವಾಗಿ ಜೂನ್ 10 ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಹಲವಾರು ಪಟ್ಟಣಗಳು ಈಗ ಸಹಜ ಸ್ಟಿತಿಗೆ ತಲುಪಿದೆ.
ಈ ಎರಡು ರಾಜ್ಯಗಳಲ್ಲಿ ಪೊಲೀಸರು ಬಂಧಿಸಿದ ವ್ಯಕ್ತಿಗಳ ಸಂಖ್ಯೆಯು ಉತ್ತರ ಪ್ರದೇಶದಲ್ಲಿ 333 ಮತ್ತು ಬಂಗಾಳದಲ್ಲಿ 200 ಕ್ಕೆ ಏರಿದೆ. ಯು.ಪಿ ಪೊಲೀಸರಿಂದ 13 ಎಫ್‌ಐಆರ್‌ಗಳು ದಾಖಲಾಗಿವೆ. ಪಶ್ಚಿಮ ಬಂಗಾಳದ ಪೊಲೀಸರು ಇದುವರೆಗೆ 42 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಜೂನ್ 9 ರಂದು ಹೌರಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ ಯಾವುದೇ ಹೊಸ ಹಿಂಸಾಚಾರ ವರದಿಯಾಗಿಲ್ಲ ಎಂದು ಪಶ್ಚಿಮ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಾವೇದ್ ಶಮೀಮ್ ಹೇಳಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯವಾಗಿಲ್ಲ ಮತ್ತು ರಸ್ತೆ ತಡೆ, ಹಲ್ಲೆ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ ಮತ್ತು ಕೋಮು ದ್ವೇಷ ಹರಡುವಿಕೆಗಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರವಾದಿ ನಿಂದಕಿಯನ್ನು ಬಂಧಿಸಲು ಆಗ್ರಹಿಸಿದವರ ಬಂಧನದ ಸಂಖ್ಯೆಯಲ್ಲೇ ಹೆಚ್ಚಳವಾಗುತ್ತಿದೆಯೇ ವಿನಃ ಇದುವರೆಗೂ ಮಾಜಿ ಬಿಜೆಪಿ ನಾಯಕಿಯ ಬಂಧನವಾಗಿಲ್ಲ.