ಮಂಗಳೂರು: ಉಪ್ಪಿನಂಗಡಿಯಲ್ಲಿ ಪ್ರತಿಭಟನಾನಿರತ ಪಿಎಫ್ ಐ ಕಾರ್ಯಕರ್ತರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಪಿಎಫ್ಐ ಕರೆ ನೀಡಿದೆ.
ರಾತೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂವರು ಪಿಎಫ್ಐ ನಾಯಕರನ್ನು ಬಂಧಿಸಿದ್ದರು. ಆದರೆ ಬಂಧನದ ವೇಳೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ ಮತ್ತು ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನಕಾರರು ಠಾಣೆ ಮುಂದೆ ಜಮಾಯಿಸಿದಾಗಲಷ್ಟೇ ವಿಚಾರಣೆಗಾಗಿ ಕರೆ ತಂದಿದ್ದೇವೆಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದಾಗ ಬಹಳ ಸಮಯದ ನಂತರ ಒಬ್ಬರನ್ನು ಬಿಡುಗಡೆಗೊಳಿಸಿದ್ದರು. ಉಳಿದಿಬ್ಬರು ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಯಾವುದೇ ಸೂಚನೆ ನೀಡದೇ ರಾತ್ರಿ 9 ಗಂಟೆ ಸುಮಾರಿಗೆ ಏಕಾಏಕಿ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಕಾರರು ಗಂಭೀರ ಗಾಯಗೊಂಡಿದ್ದಾರೆ.
ಪ್ರತಿಭಟನೆಗೆ ಕರೆ
ಉಪ್ಪಿನಂಗಡಿ ಪೊಲೀಸರು ರಾತೋರಾತ್ರಿ ಅಮಾಯಕರನ್ನು ಬಂಧಿಸಿದ್ದಲ್ಲದೇ, ಬಂಧಿತರ ಬಿಡುಗಡೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ್ದಾರೆ. ಪೊಲೀಸರ ಈ ಕ್ರೌರ್ಯವನ್ನು ಖಂಡಿಸಿ ನಾಳೆ(ಡಿ.15) ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.