ಮುಂಬೈ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಸಿನೆಮಾಟೊಗ್ರಾಫಿ ಕಾಯ್ದೆಯ ಪ್ರಸ್ತಾಪಿತ ತಿದ್ದುಪಡಿ ವಿರುದ್ಧ ಬಾಲಿವುಡ್ ನ ಹಲವು ಹಿರಿಯ ನಟ ನಟಿಯರು, ನಿರ್ದೇಶಕರು ಧ್ವನಿ ಎತ್ತಿದ್ದಾರೆ. ಈ ಸಂಬಂಧ ಅವರೆಲ್ಲಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳಾದ ಶಬನಾ ಅಝ್ಮಿ, ಫರ್ಹಾನ್ ಅಖ್ತರ್, ಅನುರಾಗ್ ಕಶ್ಯಪ್, ಹನ್ಸಲ್ ಮೆಹ್ತಾ, ವೆಟ್ರಿ ಮಾರನ್, ನಂದಿತಾ ದಾಸ್, ಝೋಯಾ ಅಖ್ತರ್ ಮತ್ತು ದಿಬಾಕರ್ ಬ್ಯಾನರ್ಜಿ ಮುಂತಾದವರು ಈ ಬಹಿರಂಗ ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಆನ್ ಲೈನ್ ಪತ್ರದಲ್ಲಿ ವಿವಿಧ ಕ್ಷೇತ್ರಗಳ ೧,೪೦೦ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಸಿನೆಮಾಗಳ ಪ್ರಮಾಣ ಪತ್ರವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಕೇಂದ್ರ ಸರಕಾರಕ್ಕೆ ಈ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಸಿನೆಮಾ ಜಗತ್ತಿಗೆ ಮತ್ತೊಂದು ದೊಡ್ಡ ಹೊಡೆತ ಎಂದು ಈ ಪತ್ರಕ್ಕೆ ಸಹಿ ಹಾಕಿದವರು ಅಭಿಪ್ರಾಯ ಪಟ್ಟಿದ್ದಾರೆ.
ಈ ತಿದ್ದುಪಡಿಯಿಂದ ಸೆನ್ಸಾರ್ ಮಂಡಳಿ ಮತ್ತು ಸುಪ್ರೀಂ ಕೋರ್ಟ್ ನ ಪರಮಾಧಿಕಾರವನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಪಾಯವನ್ನು ತಂದಡ್ಡಲಿದೆ ಎಂದು ಅಭಿಪ್ರಾಯ ಪಡಲಾಗಿದೆ.
ಈಗಾಗಲೇ ಹಲವು ಪ್ರಸಿದ್ಧ ನಟರು ಈ ಪ್ರಸ್ತಾಪಿತ ತಿದ್ದುಪಡಿ ವಿರುದ್ಧ ಮಾತನಾಡಿದ್ದಾರೆ. ಇನ್ನಷ್ಟು ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡುವ ಸಾಧ್ಯತೆಯಿದ್ದು, ಇದು ದೇಶದಲ್ಲಿ ಮತ್ತೊಂದು ಸುತ್ತಿನ ಗಂಭೀರ ಚರ್ಚೆಗಳಿಗೆ ಎಡೆ ಮಾಡಿಕೊಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.