ಪ್ರೊ. ಅಹಮದ್ ಕಮಾಲ್ ಗೆ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ 83ನೇ ಸ್ಥಾನ

Prasthutha|

ನವದೆಹಲಿ : ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಹಮದ್ ಕಮಾಲ್ ಅವರು ಟಾಪ್ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ 83ನೇ ಸ್ಥಾನ ಪಡೆದಿದ್ದು, ಭಾರತದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ತಂಡ ನಡೆಸಿರುವ ಸಮೀಕ್ಷೆ ಮತ್ತು ಅದರ ವಿಶ್ಲೇಷಣೆ ಆಧಾರದಲ್ಲಿ ಟಾಪ್ ಶೇ.2 ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಕಮಾಲ್ ಸ್ಥಾನ ಪಡೆದಿದ್ದಾರೆ.

ಭಾರತದ ವಿಜ್ಞಾನಿಗಳ ಪೈಕಿ 0.10 ಶೇ. ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಕಮಾಲ್ ಗುರುತಿಸಿಕೊಂಡಿದ್ದಾರೆ. ಔಷಧೀಯ ಮತ್ತು ಬಯೋಮೊಲಿಕ್ಯುಲರ್ ಕೆಮಿಸ್ಟ್ರಿ ವಿಷಯದಲ್ಲಿ ವಿಜ್ಞಾನಿಯಾಗಿರುವ ಪ್ರೊ. ಕಮಾಲ್ ಇಲ್ಲಿ ವರೆಗೆ 537 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.  

- Advertisement -

ಸ್ವಾನ್ ಫೋರ್ಡ್ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದಲ್ಲಿ ಸುಮಾರು 1 ಲಕ್ಷ ವಿಜ್ಞಾನಿಗಳ ಅಂಕಿಅಂಶ ಪಡೆದು, ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಪ್ರೊ. ಕಮಾಲ್ ಅವರು ಮೂರು ದಶಕಗಳ ಕಾಲ ಸಿಎಸ್ ಐಆರ್ – ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ)ಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಅವರು ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯದ ಸೇವೆಗೆ ನಿಯೋಜಿತರಾಗಿದ್ದರು.

ಪ್ರೊ. ಕಮಾಲ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆಬಿದ್ಸ್ ನ ಲಿಟ್ಲ್ ಫ್ಲವರ್ ಹೈಸ್ಕೂಲ್ ಮತ್ತು ಇಂಟರ್ ಮಿಡಿಯೇಟ್ ಅನ್ನು ನ್ಯೂ ಸೈನ್ಸ್ ಕಾಲೇಜ್ ನಲ್ಲಿ ಮುಗಿಸಿದ್ದರು. ಒಸ್ಮಾನಿಯಾ ವಿವಿಯಿಂದ ಬಿಎಸ್ ಸಿ ಪದವಿ ಪಡೆದಿರುವ ಪ್ರೊ. ಕಮಾಲ್, ಆಲಿಗಢ ಮುಸ್ಲಿಂ ವಿವಿಯಿಂದ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.    

- Advertisement -