ನಗರದಲ್ಲಿ ಗೋಡೆ ಬರಹ ಹಿಂದಿನ ಷಡ್ಯಂತರ ಬಯಲಿಗೆಳೆಯಲು SDPI ಆಗ್ರಹ | ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆಯ ಎಚ್ಚರಿಕೆ

Prasthutha: December 1, 2020

ಮಂಗಳೂರು : ಇತ್ತೀಚೆಗೆ ನಗರದಲ್ಲಿ ದುಷ್ಕರ್ಮಿಗಳು ಲಷ್ಕರ್ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹಗಳನ್ನು ಬರೆದ ಘೋರ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈ ವಿಷಯ ತಿಳಿಸಿದರು.  

ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಕ ರಸ್ತೆಯ ಗೋಡೆಯೊಂದರಲ್ಲಿ ಮೊದಲಿಗೆ ಉಗ್ರರ ಪರ ಬರಹ ಕಂಡು ಬಂದಿತ್ತು. ಆದರೆ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ತೋರಿದ್ದುದರಿಂದ ನಂತರ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಪೊಲೀಸ್ ಚೌಕಿಯ ಹಳೆ ಕಟ್ಟಡದ ಗೋಡೆಯಲ್ಲಿ ಪುನಃ ವಿವಾದಾತ್ಮಕ ಬರಹ ಕಂಡು ಬಂದಿದೆ. ಇವೆಲ್ಲಾ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಿ ಗಲಭೆ ಸೃಷ್ಟಿಸಲು ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಆಪಾದಿಸಿದರು.  

ಪೊಲೀಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಕಾರಣದಿಂದಲೇ ಇಂತಹ ಘಟನೆಗಳು ಪುನಾರಾವರ್ತನೆಯಾಗುತ್ತಿವೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಯಾಕೆ ಬಂಧಿಸಿಲ್ಲ ಎಂಬುದು ಯಕ್ಷ ಪ್ರಶ್ನೆ ಎಂದು ಅವರು ಹೇಳಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ದೇಶದ್ರೋಹದ ಹೇಳಿಕೆ ನೀಡಿದ ಸಂದರ್ಭವೂ ಪೊಲೀಸ್ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸದೆ, ಸಂಘ ಪರಿವಾರದ ತಾಳಕ್ಕೆ ತಕ್ಕಂತೆ ಕುಣಿದಿತ್ತು, ಇದರಿಂದಾಗಿ ಇಂತಹ ಮನಸ್ಥಿತಿಯ ದುಷ್ಕರ್ಮಿಗಳಿಗೆ ದೇಶದ್ರೋಹದ ಬರಹ ಬರೆಯಲು ಮತ್ತು ಹೇಳಿಕೆ ನೀಡಲು ಧೈರ್ಯ ಸಿಕ್ಕಂತಾಗಿದೆ ಎಂದು ಅವರು ತಿಳಿಸಿದರು.

ಈ ಹಿಂದೆಯೂ ಹಲವು ಬಾರಿ ಸಂಘ ಪರಿವಾರ ಶಾಂತಿ ಕದಡಲು ಈ ರೀತಿಯ ಉಗ್ರ ಕೃತ್ಯವನ್ನು ಮಾಡಿದ್ದನ್ನು ಈ ರಾಜ್ಯ ಕಂಡಿದೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿರುವುದು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಘಟನೆ, ಚಾಮರಾಜನಗರದ ದೇವಸ್ಥಾನಕ್ಕೆ ದನದ ರುಂಡ ಎಸೆದಿರುವುದು, ಕೆಲವೇ ದಿನಗಳ ಹಿಂದೆ ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಧ್ವಜ ಹಾರಿಸಿದ ಕೃತ್ಯ, ಇಂತಹ ಯಾವುದೇ ಘಟನೆಗಳು ನಡೆದಾಗ, ಅದನ್ನು ಅಲ್ಪಸಂಖ್ಯಾತರ ತಲೆಗೆ ಕಟ್ಟಲು ಪ್ರಯತ್ನ ಪಟ್ಟಿರುವುದನ್ನು ನಾವು ಕಾಣಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ನಿಷ್ಟಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರಿಂದ ಸಂಭಾವ್ಯ ಗಲಭೆ ತಪ್ಪಿತ್ತು ಎಂದು ಅವರು ಸ್ಮರಿಸಿದರು.  

ಗ್ರಾ.ಪಂ. ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ, ಈ ಸಮಯದಲ್ಲಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ಕೋಮು ಧ್ರುವೀಕರಣ ಯತ್ನವನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಡಿವಾಣ ಹಾಕಲೇಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ಉಗ್ರರ ಪರ ಗೋಡೆ ಬರಹ ಬರೆದಿರುವ ದುಷ್ಕರ್ಮಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಸ್ಯ ತೋರಿದಲ್ಲಿ ಎಸ್ ಡಿಪಿಐ ಇದರ ವಿರುದ್ಧ ಜಿಲ್ಲಾದ್ಯಂತ ಹೋರಾಟವನ್ನು ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದರು.  

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಾಹುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಬೆಳ್ಳಾರೆ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ ಮುಂತಾದವರು ಉಪಸ್ಥಿತರಿದ್ದರು

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ