ನವದೆಹಲಿ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲಾಗಿದೆ.
ಈ ವೇಳೆ ಅವರ ಕಾರನ್ನು ಪೊಲೀಸರು ಲಕ್ನೋ – ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯ ಪ್ಲಾಝಾ ಟೋಲ್ ನಲ್ಲಿ ತಡೆ ಹಿಡಿಯಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಲಖಿಂಪುರ ಖೇರಿ ಘಟನೆಯಲ್ಲಿ ಹತ್ಯೆಗೀಡಾದ ರೈತರ ಕುಟುಂಬಗಳನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಅವರನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಮಧ್ಯೆ ಘಟನಾ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿಯಿದ್ದು, ಪೊಲೀಸರು ಸೆಕ್ಷನ್ 144 ನಿಷೇಧಾಜ್ಞೆ ಹೇರಿದ್ದಾರೆ.
25 ಲಕ್ಷ ರುಪಾಯಿ ಕಳ್ಳತನ ಆರೋಪದಲ್ಲಿ ಅರುಣ್ ವಾಲ್ಮೀಕಿ ಎಂಬಾತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ನಂತರ ಆತ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಆತನ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ತಡೆದು ಕರೆದೊಯ್ದಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಅರುಣ್ ವಾಲ್ಮೀಕಿ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಅಲ್ಲಿಗೆ ಭೇಟಿಯಾಗಲು ಬಯಸುತ್ತಿದ್ದೇನೆ. ಆದರೆ ನನ್ನನ್ನು ತಡೆಯುವ ಮೂಲಕ ರಾಜ್ಯ ಸರ್ಕಾರ ತನ್ನ ಬೆದರಿಕೆ ತೋರಿಸುತ್ತಿದೆ. ಮಾತ್ರವಲ್ಲ ಬುದ್ಧ ಬಗ್ಗೆ ಪ್ರಧಾನಿ ಮೋದಿ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಭಗವಾನ್ ವಾಲ್ಮೀಕಿ ಜಯಂತಿ ದಿನ ನನ್ನ ಮೇಲೆ ದಾಳಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಮತಿ ಪಡೆಯದೇ ಸ್ಥಳಕ್ಕಾಗಮಿಸಿದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.