ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಬಂದ್ ಕರೆಗೆ 36 ಖಾಸಗಿ ಸಾರಿಗೆ ಸಂಘಟನೆಗಳು ಬೆಂಬಲ ನೀಡಿವೆ. ಇಂದು ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12ರವರೆಗೆ ಖಾಸಗಿ ಸಾರಿಗೆಗಳು ಬೆಂಗಳೂರಲ್ಲಿ ಸಂಚರಿಸುವುದಿಲ್ಲ.
ನಾಳೆ ಬೆಳಗ್ಗೆ 10 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ (KSR) ಫ್ರೀಡಂಪಾರ್ಕ್ವರೆಗೆ ರ್ಯಾಲಿ ನಡೆಸುತ್ತೇವೆ. ಪ್ರತಿಭಟನೆಗೆ ಖಾಸಗಿ ಬಸ್ಗಳ ಮಾಲೀಕರು ಆಗಮಿಸಲಿದ್ದಾರೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನೆಗೆ ರಾಮನಗರ, ಮೈಸೂರು, ಕನಕಪುರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆಯಿಂದ ಖಾಸಗಿ ಬಸ್ ಮಾಲೀಕರು ತಮ್ಮ ತಮ್ಮ ಬಸ್ಸುಗಳ ಮೂಲಕ ಬರುತ್ತಿದ್ದಾರೆ. ಬೆಂಗಳೂರಿನ ಮೂಲೆ ಮೂಲೆಗಳಿಂದ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಕೆಂಗೇರಿ, ಹೆಬ್ಬಾಳ, ಕೆ.ಆರ್ ಪುರಂ, ಚಾಲಕರು ಬರುತ್ತಿದ್ದಾರೆ. ಈ ರ್ಯಾಲಿಯಲ್ಲಿ 3 ರಿಂದ 5 ಸಾವಿರ ಜನರು ಸೇರುಸುತ್ತೇವೆ. ಸೋಮವಾರ 7 ರಿಂದ 10 ಲಕ್ಷ ವಾಹನಗಳು ಸಂಚಾರ ಮಾಡಲ್ಲ ಎಂದು ತಿಳಿಸಿದರು.
ವೈಟ್ ಬೋರ್ಡ್ನಲ್ಲಿ ಬಾಡಿಗೆ ಹೊಡೆಯಲಾಗುತ್ತಿದೆ. ಶಕ್ತಿ ಯೋಜನೆಯಿಂದ ನಮಗೆ ದೊಡ್ಡ ಮಟ್ಟದಲ್ಲಿ ಹೊಡೆತ ಆಗಿದೆ. ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದಲೂ ನಮಗೆ ತುಂಬಾ ಸಮಸ್ಯೆ ಆಗಿದೆ ಇದನ್ನು ಸರ್ಕಾರ ನಿಲ್ಲಿಸಬೇಕು. ಇಂದು ರಾತ್ರಿಯೊಳಗೆ ಸಚಿವರು ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸಿದರೇ ಬಂದ್ ಹಿಂಪಡೆಯುತ್ತೇವೆ ಎಂದು ತಿಳಿಸಿದರು.