7,139 ಭಾರತೀಯರು ವಿಶ್ವದಾದ್ಯಂತ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇವರಲ್ಲಿ ವಿಚಾರಣಾ ಕೈದಿಗಳು ಸೇರಿದ್ದಾರೆ. ಆದರೆ, ಅನೇಕ ದೇಶಗಳಲ್ಲಿ ಕಟ್ಟುನಿಟ್ಟಾದ ಗೌಪ್ಯತಾ ಕಾನೂನುಗಳು ಜಾರಿಯಲ್ಲಿರುವುದರಿಂದ ಕೈದಿಗಳ ಒಪ್ಪಿಗೆಯಿಲ್ಲದೆ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ವಿದೇಶಾಂಗ ಸಹ ಸಚಿವ ವಿ.ಮುರಳೀಧರನ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಜೈಲಿನಲ್ಲಿ ಅತೀ ಹೆಚ್ಚು ಭಾರತೀಯರು ಇದ್ದಾರೆ. ಅಲ್ಲಿ 1,599 ಭಾರತೀಯ ಕೈದಿಗಳಿದ್ದಾರೆ. ಯುಎಇ 898, ನೇಪಾಳ್ 886, ಮಲೇಶ್ಯ 548, ಕುವೈತ್ 536 ಇವು ವಿವಿಧ ದೇಶಗಳಲ್ಲಿನ ಭಾರತೀಯ ಕೈದಿಗಳ ಸಂಖ್ಯೆಯಾಗಿದೆ. ಅನೇಕ ದೇಶಗಳು ಗೌಪ್ಯತೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಆದ್ದರಿಂದ ಬಂಧಿತನ ಒಪ್ಪಿಗೆಯಿಲ್ಲದೆ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಬಂಧನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವ ದೇಶಗಳು ಸಹ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನೀಡುವುದಿಲ್ಲ. ಹೆಚ್ಚಿನ ಸಂಖ್ಯೆಯ ಭಾರತೀಯ ಖೈದಿಗಳನ್ನು ಹೊಂದಿರುವ ದೇಶಗಳಲ್ಲಿ ಪ್ರಾದೇಶಿಕ ಬಾರ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮುರಳೀಧರನ್ ಸದನಕ್ಕೆ ತಿಳಿಸಿದ್ದಾರೆ.