ಕಳೆದ ಬಿಜೆಪಿ ಸರಕಾರವು ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿದೆ: ಸಚಿವ ಜಮೀರ್ ಅಹ್ಮದ್ ಖಾನ್

Prasthutha|

ದ.ಕ.ಜಿಲ್ಲಾ ಅಭಿನಂದನಾ ಸಮಿತಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಸನ್ಮಾನ ಕಾರ್ಯಕ್ರಮ

- Advertisement -

ಮಂಗಳೂರು: ಕಳೆದ ಬಿಜೆಪಿ ಸರಕಾರವು ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿದೆ ಎಂದು ರಾಜ್ಯ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.  

ದ.ಕ.ಜಿಲ್ಲಾ ಅಭಿನಂದನಾ ಸಮಿತಿ ಹಾಗೂ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರಕಾರವು ವಿದ್ಯಾರ್ಥಿ ವೇತನ, ಅರಿವು ಯೋಜನೆಯಲ್ಲಿ ಮುಸ್ಲಿಮರಿಗೆ ಸಾಕಷ್ಟು ಅನ್ಯಾಯ ಮಾಡಿತ್ತು. ನಮ್ಮ ಸರಕಾರವು ಆ ಅನ್ಯಾಯವನ್ನು ಸರಿಪಡಿಸುತ್ತಿದೆ. ಕಾಂಗ್ರೆಸ್ ಯಾವತ್ತೂ ಕೂಡ ಯಾರಿಗೂ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ. ಎಲ್ಲಾ ಸಮುದಾಯವನ್ನು ಸರಿ ಸಮಾನವಾಗಿ ಕಂಡಿದೆ. ಮುಂದೆಯೂ ಕಾಣುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಲಿದ್ದೇವೆ ಎಂದು ಹೇಳಿದರು.

- Advertisement -

ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆ: ಸಚಿವ ರಹೀಂ ಖಾನ್

ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರ ಶಿಲಾನ್ಯಾಸವನ್ನೂ ನೆರವೇರಿಸಲಾಗುವುದು. ನಾವು ಉನ್ನತ ಸ್ಥಾನದಲ್ಲಿದ್ದರೂ ಕೂಡ ಜನಸಾಮಾನ್ಯರ ಸೇವಕರಾಗಿದ್ದೇವೆ. ಹಾಗಾಗಿ ಸಮುದಾಯದ ಸಬಲೀಕರಣ ಮಾಡಲಿದ್ದೇವೆ ಎಂದು ರಾಜ್ಯ ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಹೇಳಿದರು.

ರಾಜ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರ: ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್

ರಾಜ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರವಿದೆ. ಆದರೆ ಅದು ಸ್ವತಃ ಮುಸ್ಲಿಮರಿಗೂ ತಿಳಿದಿಲ್ಲ. ಸಂವಹನದ ಕೊರತೆಯನ್ನು ನಾವೇ ದೂರ ಮಾಡಿಕೊಂಡು ಮುನ್ನಡೆಯಬೇಕು. ಈ ಹಿಂದೆ ಎಸ್ಸಿ-ಎಸ್ಟಿಗೆ ಮಾತ್ರ ಮೀಸಲಾಗಿದ್ದ ಸಾಲ ಯೋಜನೆ ಹಾಗು 1 ಕೋ.ರೂ. ಮೊತ್ತದ ಗುತ್ತಿಗೆ ಕಾಮಗಾರಿಗಳನ್ನು ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೂ ಮೀಸಲಿಡಲಾಗಿದೆ. ಸರಕಾರದ ಗ್ಯಾರಂಟಿ ಸಹಿತ ಇತರ ಎಲ್ಲಾ ಯೋಜನೆಗಳನ್ನು ಮುಸ್ಲಿಮರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹೇಳಿದರು.

ದ.ಕ. ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಎನ್‌ಕೆಎಂ ಶಾಫಿ ಸಅದಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಭಾಗವಹಿಸಿದ್ದರು.

ಅಭಿನಂದನಾ ಸಮಿತಿಯ ಸಂಚಾಲಕ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಭಿನಂದನಾ ಭಾಷಣ ಮಾಡಿದರು. ಯುವ ವಿದ್ವಾಂಸ ಡಾ.ಎಮ್ಮೆಸ್ಸೆಂ ಅಬ್ದುರ‌್ರಶೀದ್ ಝೈನಿ ಕಾಮಿಲ್ ಸನ್ಮಾನ ಪತ್ರ ವಾಚಿಸಿದರು. ಅಭಿನಂದನಾ ಸಮಿತಿಯ ಸದಸ್ಯ ಮುಮ್ತಾಝ್ ಅಲಿ ವಂದಿಸಿದರು. ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಬೇಡಿಕೆಗಳು

► ಜಿಲ್ಲೆಯ ಮುಸ್ಲಿಂ ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕು.

►ಸ್ವ ಉದ್ಯೋಗಕ್ಕೆ ವಿಶೇಷ ಆರ್ಥಿಕ ನೆರವು ಪ್ರಕಟಿಸಬೇಕು.

►ಉನ್ನತ ಶಿಕ್ಷಣ ಪಡೆಯುವ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇರುವ ನಿಯಮಗಳನ್ನು ಸಡಿಲಿಸಬೇಕು.

►ಕಳೆದ ಸರಕಾರವು ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿದ್ದ ಮುಸ್ಲಿಂ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆಗೊಳಿಸಿದೆ. ಅವರನ್ನು ಮರಳಿ ಜಿಲ್ಲೆಗೆ ಕರೆಸಿಕೊಳ್ಳಬೇಕು.

►ಮದ್ರಸ ಶಿಕ್ಷಕರಿಗೆ ಗೌರವ ಧನ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು.

►ಮುಸ್ಲಿಂ ಮಹಿಳಾ ರೋಗಿಗಳು ವಕ್ಫ್ ಮಂಡಳಿಯಿಂದ ಪಡೆಯುವ ಅನುದಾನದ ನಿಯಮಗಳನ್ನು ಸರಳೀಕರಣಗೊಳಿಸಬೇಕು.

►ಶೀಘ್ರದಲ್ಲೇ ಹಜ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಬೇಕು.

Join Whatsapp