ಐಟಿ ಕಾಯ್ದೆ ತಿದ್ದುಪಡಿಯಿಂದ ಪತ್ರಿಕಾ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ- ಐಎನ್’ಎಸ್ ಆತಂಕ

Prasthutha|

ನವದೆಹಲಿ: ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ಭಾರತೀಯ ವೃತ್ತಪತ್ರಿಕೆ ಸೊಸೈಟಿ (ಐಎನ್’ಎಸ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಈ ಕರಡು ತಿದ್ದುಪಡಿಯು ಪತ್ರಿಕಾ ಕಾರ್ಯನಿರ್ವಹಣೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ. ಸುದ್ದಿ ವರದಿಗಳ ಸತ್ಯಾಸತ್ಯತೆ ನಿರ್ಧರಿಸುವ ಅಧಿಕಾರವನ್ನು ಪಿಐಬಿ ಮತ್ತು ಕೇಂದ್ರ ಸರ್ಕಾರ ನಿಯೋಜಿಸಿದ ಸಂಸ್ಥೆಗಳಿಗೆ ನೀಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಐಎನ್’ಎಸ್ ಹೇಳಿದೆ.

- Advertisement -


ಪ್ರಸ್ತಾವಿತ ತಿದ್ದುಪಡಿಯು ಭಾರತದಲ್ಲಿ ಪತ್ರಿಕಾ ಕಾರ್ಯಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಏಜೆನ್ಸಿಗೆ ಹಸ್ತಾಂತರಿಸಬೇಕಾಗುತ್ತದೆ ಮತ್ತು ಆ ಏಜೆನ್ಸಿಗೆ ಕಾನೂನಿನ ಅಧಿಕಾರವನ್ನು ನೀಡಲಾಗುತ್ತದೆ ಎಂದು ಸೊಸೈಟಿ ಅಭಿಪ್ರಾಯಪಟ್ಟಿದೆ. ಇದು ಕಿಡಿಗೇಡಿತನಕ್ಕೆ ಕಾರಣವಾಗಬಹುದು, ಏಕೆಂದರೆ ಇದು ಕೇಂದ್ರ ಸರ್ಕಾರಕ್ಕೆ ತನ್ನ ಕ್ರಮಗಳ ಬಗ್ಗೆ ಯಾವುದೇ ಟೀಕೆಯನ್ನು ನಿಷೇಧಿಸುವ ಅಧಿಕಾರವನ್ನು ಹೊಂದಲು ಅನುವು ಮಾಡಿಕೊಡುತ್ತದೆ” ಎಂದು ಅದು ಹೇಳಿದೆ.
ಕೇಂದ್ರೀಯ ಏಜೆನ್ಸಿಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಶೀಲಿಸುವ ಜವಾಬ್ದಾರಿ ಹಸ್ತಾಂತರಿಸುತ್ತದೆ. ಇದು ಕೇಂದ್ರ ಸರ್ಕಾರ ವಿರುದ್ಧದ ಟೀಕೆ ತೆಗೆದುಹಾಕಲು ಸಹಕಾರಿಯಾಗುತ್ತದೆ” ಎಂದು ಐಎನ್ಎಸ್ ಅಭಿಪ್ರಾಯಪಟ್ಟಿದೆ.


ಇದಕ್ಕೂ ಮೊದಲು ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವ ಬಗ್ಗೆ ಭಾರತೀಯ ಸಂಪಾದಕರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

- Advertisement -

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಐಟಿ ನಿಯಮಗಳಲ್ಲಿ ಎರಡು ಕರಡು ತಿದ್ದುಪಡಿಯ ಕುರಿತು ಪ್ರಸ್ತಾಪಿಸಿದೆ. ಕೇಂದ್ರದ ಈ ತಿದ್ದುಪಡಿಗಳು ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುತ್ತವೆ ಎಂಬ ಆರೋಪದ ಬೆನ್ನಲ್ಲೇ, ಇದೀಗ ಐಎನ್ಎಸ್ ತಿದ್ದುಪಡಿ ಕೈಬಿಡುವಂತೆ ಮನವಿ ಮಾಡಿದೆ.


ಕರಡು ನಿಯಮದ ಪ್ರಕಾರ, ಸುದ್ದಿ ವರದಿಗಳ ಸತ್ಯಾಸತ್ಯತೆ ನಿರ್ಧರಿಸುವ ಅಧಿಕಾರವನ್ನು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಮತ್ತು ಕೇಂದ್ರ ಸರ್ಕಾರ ನಿಯೋಜಿಸಿದ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ಸಂಸ್ಥೆಗಳು ನಕಲಿ ಅಥವಾ ಸುಳ್ಳು ಸುದ್ದಿ ನಿರ್ಧರಿಸಿದ ತಕ್ಷಣ ಆ ಮಾಹಿತಿಗಳನ್ನು ಅಂತರ್ಜಾಲ ಮತ್ತು ಇತರೆ ಮೂಲಗಳಿಂದ ತೆಗೆದುಹಾಕಲಾಗುತ್ತದೆ.
“ಸರ್ಕಾರವು ಈ ಕರಡು ತಿದ್ದುಪಡಿಯ ಮೂಲಕ ತಾನೇ ನ್ಯಾಯಾಧೀಶರ ಸ್ಥಾನದಲ್ಲಿ ಕೂರಬಹುದು. ತನ್ನ ವಿರುದ್ಧ ಕೇಳಿಬಂದ ಟೀಕೆಗಳನ್ನು ತೆಗೆದುಹಾಕಲು ಈ ತಿದ್ದುಪಡಿ ಸಹಾಯ ಮಾಡುತ್ತದೆ. ಟೀಕೆಗಳಿಂದ ಹಿಂದೆ ಸರಿಯಲು ಸರ್ಕಾರ ಈ ಹೆಜ್ಜೆ ಇಟ್ಟಂತಿದೆ” ಎಂದು ಹೇಳಿದೆ.


ಸುದ್ದಿಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು ಮತ್ತು ಐಟಿ ನಿಯಮಗಳಲ್ಲಿ ನ್ಯಾಯಸಮ್ಮತ ಮಾನದಂಡಗಳನ್ನು ಕಾರ್ಯರೂಪಕ್ಕೆ ತರಲು ಸಚಿವಾಲಯವು ಮಾಧ್ಯಮಗಳ ಜೊತೆಗೆ ಸಮಾಲೋಚನೆ ನಡೆಸುವಂತೆ ಐಎನ್ಎಸ್ ಮನವಿ ಮಾಡಿದೆ.

ಸರ್ಕಾರದ ಐಟಿ ನಿಯಮಗಳ ಕರಡು ತಿದ್ದುಪಡಿಯ ವಿರುದ್ಧ ಭಾರತೀಯ ಸಂಪಾದಕರ ಒಕ್ಕೂಟ ಕಳವಳ ವ್ಯಕ್ತಪಡಿಸಿ, “ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರದ ಕೈಯಲ್ಲಿ ಇರಬಾರದು. ಆದರೆ, ಸಚಿವಾಲಯದ ತಿದ್ದುಪಡಿ ನಿಯಮಗಳು ಮಾಧ್ಯಮಗಳ ಸೆನ್ಸಾರ್ಶಿಪ್ಗೆ ಕಾರಣವಾಗುತ್ತವೆ ಮತ್ತು ಮಾಧ್ಯಮಗಳನ್ನು ಹತ್ತಿಕ್ಕಲು ಸರ್ಕಾರಕ್ಕೆ ನೆರವಾಗುತ್ತವೆ” ಎಂದು ಅಭಿಪ್ರಾಯಪಟ್ಟಿತ್ತು.

Join Whatsapp