ಲಕ್ನೋ: ಹೋಳಿ ಹಬ್ಬದಂದು ‘ನರಬಲಿ’ ನೀಡಲು 7 ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿಗಳ ಜಾಲವನ್ನು ಭೇದಿಸಿದ ನೋಯ್ಡಾ ಪೊಲೀಸರು ಬಾಗ್ಪತ್ ಜಿಲ್ಲೆಯಿಂದ ಮಗುವನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರ್ಚ್ 13 ರಂದು ನೋಯ್ಡಾದ ಸೆಕ್ಟರ್ 63 ಪೊಲೀಸ್ ಠಾಣಾ ವ್ಯಾಪ್ತಿಯ ಛಿಜಾರ್ಸಿಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಆತಂಕಗೊಂಡ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ಹಿನ್ನೆಲೆಯಲ್ಲಿ, ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ನೋಯ್ಡಾ ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದರು.
ಬಂಧಿತ ಆರೋಪಿಗಳನ್ನು ಸೋನು ವಾಲ್ಮಿಕಿ ಮತ್ತು ನೀತು ಎಂದು ಗುರುತಿಸಲಾಗಿದೆ. ಸತೇಂದ್ರ ಸಹಿತ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳು ಯಾವುದೇ ಅಪರಾಧದ ಇತಿಹಾಸ ಹೊಂದಿಲ್ಲದಿದ್ದರೂ ಮದ್ಯಪಾನಿಗಳಾಗಿದ್ದರು ಎಂದು ತಿಳಿದು ಬಂದಿದೆ.
ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿಯೇ ಅವಿವಾಹಿತ ಸೋನು ವಾಸಿಸುತ್ತಿದ್ದು, ಸತೇಂದ್ರನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದ. ಆ ವೇಳೆ ಹೋಳಿಯಲ್ಲಿ ನರಬಲಿ ಕೊಟ್ಟರೆ ಮದುವೆ ಭಾಗ್ಯ ಉಂಟಾಗುವುದಾಗಿ ಸತೇಂದ್ರ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ 7 ವರ್ಷದ ಬಾಲಕಿಯನ್ನು ಸೋನು ಅಪಹರಿಸಿದ್ದು, ನರಬಲಿಗೆ ಎಲ್ಲ ಸಿದ್ಧತೆ ನಡೆದಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ 50ಸಾವಿರ ಬಹುಮಾನ ಘೋಷಿಸಿದ್ದಾರೆ.