ಬಿಜೆಪಿಯಿಂದ ಮತ್ತೆ ಪುಲ್ವಾಮಾ, ಬಾಲಕೋಟ್ ರೀತಿಯ ದಾಳಿಗೆ ಸಿದ್ಧತೆ: ಪ್ರಶಾಂತ್ ಭೂಷಣ್

Prasthutha|

ನವದೆಹಲಿ: ಈ ಸಲದ ಲೋಕಸಭೆ ಚುನಾವಣೆಗಾಗಿ ಬಿಜೆಪಿ 2019ರ ಚುನಾವಣೆಗೂ ಮುನ್ನ ನಡೆಸಿದಂತೆ ಪುಲ್ವಾಮಾ 2 ಮತ್ತು ಬಾಲಕೋಟ್ 2ರ ತಯಾರಿ ನಡೆಸಲಾಗುತ್ತಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

- Advertisement -

ಬಿಜೆಪಿ ಸರ್ಕಾರ ಈಗ ಮತ್ತೆ ದೇಶದ ಮೇಲೆ ಭಯೋತ್ಪಾದನಾ ದಾಳಿ ಮಾಡಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ತಯಾರಿ ನಡೆಸುತ್ತಿದೆ. ಪುಲ್ವಾಮಾ ಮತ್ತು ಬಾಲಕೋಟ್ ರೀತಿಯಲ್ಲೇ ದಾಳಿ ಮಾಡಿಸಲು ಬಿಜೆಪಿ ನಡೆಸುತ್ತಿರುವ ತಯಾರಿ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ನನಗೆ ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿಯ ಹೆಸರು ನಾನೀಗ ಹೇಳಲಾರೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

ಪುಲ್ವಾಮಾ ರೀತಿಯ ಎರಡನೇ ದಾಳಿಯನ್ನು ಅಯೋಧ್ಯೆ ರಾಮ ಮಂದಿರದ ಮೇಲೆ ಮಾಡಿಸಲಾಗುತ್ತದೆ. ಇದನ್ನು ಜೈಶ್-ಎ-ಮೊಹಮ್ಮದ್ ಅಥವಾ ಅಲ್‌ಕೈದಾ ಮೂಲಕ ಮಾಡಿಸಲಾಗುತ್ತದೆ. ಇನ್ನು ಬಾಲಕೋಟ್ ರೀತಿಯ ದಾಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿಯಿದೆ. ಬಿಜೆಪಿಯ ಒನ್ ಇಂಡಿಯಾ ಎಂಬ ಮಾಧ್ಯಮ ಸಂಸ್ಥೆ ಈಗಾಗಲೇ ಅಲ್‌ಕೈದಾ ಮತ್ತು ಜೈಶ್ ಎ ಮೊಹಮ್ಮದ್ ಅಯೋಧ್ಯೆ ರಾಮಮಂದಿರದ ಮೇಲೆ ದಾಳಿ ಮಾಡುವುದಾಗಿ ಹೇಳಿಕೆ ನೀಡಿದೆ ಎಂದು ವರದಿ ಮಾಡಿದೆ ಎಂದು ಪ್ರಶಾಂತ್ ಭೂಷಣ್ ಅತಿ ಗಂಭೀರ ವಿಷಯವನ್ನು ವಿವರಿಸಿದ್ದಾರೆ.

- Advertisement -

ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿ ಸಂಚರಿಸುತ್ತಿದ್ದ ವಾಹನದ ಮೇಲೆ ಬಾಂಬ್ ದಾಳಿ ನಡೆದು 40 ಮಂದಿ ಹುತಾತ್ಮರಾದ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಬಳಿಕ ಫೆಬ್ರವರಿ 26, 2019 ರಂದು ಎಲ್‌ಒಸಿ ದಾಟಿ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿತ್ತು.

ಆದರೆ ಬಿಜೆಪಿ ಪಕ್ಷದವರೇ ಆದ, ಜಮ್ಮು ಮತ್ತು ಕಾಶ್ಮೀರದ ಆಗಿನ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಈ ದಾಳಿಯ ಸತ್ಯಾಸತ್ಯತೆಯನ್ನು ಬಳಿಕ ಪ್ರಶ್ನಿಸಿದ್ದರು. ಏಪ್ರಿಲ್ 2023 ರಲ್ಲಿ, ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಅವರು, ಪ್ರಧಾನಿ ಮೋದಿ ಮೇಲೆ ಗಂಭೀರ ಆರೋಪ ಮಾಡಿದ್ದರು.

ನಮ್ಮ ತಪ್ಪಿನಿಂದ ಇದು ಸಂಭವಿಸಿದೆ. ನಾವು ವಿಮಾನವನ್ನು ನೀಡಿದ್ದರೆ ಇದು ಸಂಭವಿಸುತ್ತಿರಲಿಲ್ಲ ಎಂದು ನಾನು ದಾಳಿ‌ ನಡೆದ ಸಂಜೆ ಪ್ರಧಾನ ಮಂತ್ರಿಗೆ ಹೇಳಿದೆ. ಆದರೆ ಈಗ ಮೌನವಾಗಿರಲು ನನಗೆ ಪ್ರಧಾನಿ ಹೇಳಿದರು ಎಂದು ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ತಿಳಿಸಿದ್ದರು. ಅದಾದ ಬಳಿಕ ಸತ್ಯಪಾಲ್ ಮಲಿಕ್ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆದಿದೆ.

Join Whatsapp