ಉಳ್ಳಾಲ: ಕುಂಪಲ ಆಶ್ರಯ ಕಾಲೊನಿ ನಿವಾಸಿ ಹಾಗೂ ಮಾಡೆಲ್ ಪ್ರೇಕ್ಷಾ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಜಾ ವ್ಯಸನಿಗಳ ಮೇಲೆ ದೂರಿರುವ ಮೋಹನ್ ಶೆಟ್ಟಿ ಅವರ ಮನೆಗೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 11 ಮಂದಿ ಗಾಂಜಾ ಸೇವಿಸಿರುವ ವರದಿ ಪಾಸಿಟಿವ್ ಆಗಿದೆ.
ಮನೆಯಲ್ಲಿ ಮೋಹನ್ ಮತ್ತು ಪತ್ನಿ ಇಬ್ಬರೇ ಇದ್ದ ಸಂದರ್ಭದಲ್ಲಿ ಗುರುವಾರ ತಡರಾತ್ರಿ 12 ಗಂಟೆಯ ವೇಳೆಗೆ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆಯಲಾಗಿದೆ. ಗಾಜು ಒಡೆದು ಕಲ್ಲು ಮನೆಯೊಳಕ್ಕೆ ಬಿದ್ದಿದೆ. ಪ್ರೇಕ್ಷಾ ಸಾವು ಸಂಭವಿಸಿದ ಸಂದರ್ಭ ಮೋಹನ್ ಶೆಟ್ಟಿ, ಗಾಂಜಾ ವ್ಯಸನಿಗಳ ಕೃತ್ಯ ಎಂದು ಆರೋಪಿಸಿದ್ದರು. ಅಲ್ಲದೇ ಪ್ರೇಕ್ಷಾ ಮನೆಗೆ ಬಂದಿದ್ದ ಮೂವರು ಯುವಕರ ಕುರಿತು ಹೇಳಿರುವ ಸ್ಥಳೀಯ ಅಂಗಡಿ ಮಾಲೀಕರಿಗೂ ಗಾಂಜಾ ಗ್ಯಾಂಗ್ ಜೀವ ಬೆದರಿಕೆಯೊಡ್ಡಿದೆ ಎಂದು ತಿಳಿದು ಬಂದಿದೆ.
‘ಮಗಳ ಅಂತಿಮ ಸಂಸ್ಕಾರದ ಸಂದರ್ಭದಲ್ಲೂ ಗಾಂಜಾ ಗ್ಯಾಂಗ್ ಬೆದರಿಕೆ ಒಡ್ಡಿತ್ತು. ಗಾಂಜಾ ವ್ಯಸನಿಗಳ ಕುರಿತು ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದೆ. ಬಳಿಕ ಅಂಗಡಿಯವರಿಗೆ, ಸ್ಥಳೀಯರಿಗೆ ಜೀವ ಬೆದರಿಕೆಯನ್ನು ಒಡ್ಡಿದೆ. ಅವರಿಗೆ ಇಷ್ಟು ಕಿರುಕುಳ ನೀಡಿದವರು ಮಗಳಿಗೆ ಎಷ್ಟು ಕಿರುಕುಳ ನೀಡಿರಬಹುದು? ಅವರ ಮಾನಸಿಕ ಕಿರುಕುಳದಿಂದಲೇ ಬೇಸತ್ತು ಪ್ರೇಕ್ಷಾ ಸಾವನ್ನಪ್ಪಿದ್ದಾಳೆ’ ಎಂದು ಪ್ರೇಕ್ಷಾ ತಂದೆ ಚಿತ್ತಪ್ರಸಾದ್ ತಿಳಿಸಿದ್ದಾರೆ.