ನವದೆಹಲಿ: 1994 ರಲ್ಲಿ ರುವಾಂಡಾದಲ್ಲಿ ನಡೆದ ಜನಾಂಗೀಯ ಹತ್ಯೆಯು ಭಾರತದಲ್ಲೂ ಮುಸ್ಲಿಮರ ವಿರುದ್ಧ ಮರುಕಳಿಸುವ ಸಾಧ್ಯತೆಯಿದೆ ಎಂದು ಜನಾಂಗೀಯ ಹತ್ಯೆಯ ವೀಕ್ಷಣೆ ಸಂಸ್ಥೆಯ ಸಂಸ್ಥಾಪಕ ಗ್ರೆಗೊರಿ ಸ್ಯಾಂಟನ್ ಎಚ್ಚರಿಸಿದ್ದಾರೆ.
ಕಾಶ್ಮೀರ ಮತ್ತು ಅಸ್ಸಾಮ್ ನಲ್ಲಿ ನಡೆದ ಹತ್ಯಾಕಾಂಡಗಳು ಇದರ ಆರಂಭಿಕ ಚಿಹ್ನೆಗಳಾಗಿವೆ ಎಂದು ಅವರು ತಿಳಿಸಿದರು.
ಜನಾಂಗೀಯ ಹತ್ಯೆ ಒಂದು ಆಕಸ್ಮಿಕ ಘಟನೆಯಲ್ಲ. ಅದೊಂದು ವ್ಯವಸ್ಥಿತ ಮತ್ತು ಪೂರ್ವಯೋಜಿತ ಪ್ರಕ್ರಿಯೆ ಆಗಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ನಡೆಯುವ ಜನಾಂಗೀಯ ಹತ್ಯೆಯ ಕುರಿತು ಜನಾಂಗೀಯ ಹತ್ಯೆಯ ವೀಕ್ಷಣೆಯ ಸಂಸ್ಥಾಪಕ ಸ್ಯಾಂಟನ್ 2002 ರಲ್ಲಿ ನಡೆದ ಗುಜರಾತ್ ಗಲಭೆಯ ಸಂದರ್ಭದಲ್ಲೇ ಭಾರತಕ್ಕೆ ಎಚ್ಚರಿಕೆ ನೀಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮುಸ್ಲಿಮ್ ವಿರೋಧಿ ಧೋರಣೆಯನ್ನು ಬಳಸುತ್ತಿರುವುದನ್ನು ಸ್ಯಾಂಟನ್ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಎರಡು ಪ್ರಮುಖ ನೀತಿಗಳನ್ನು ಅವರು ಸೂಚಿಸಿದ್ದಾರೆ. ಕಾಶ್ಮೀರದ ಆರ್ಟಿಕಲ್ 370 ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಮುಸ್ಲಿಮರನ್ನು ಪೌರತ್ವದಿಂದ ಹೊರಗಿಡುವ ಮತ್ತು ಗಡಿಪಾರು ಮಾಡಲು ಅನುಮತಿ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.
ರುವಾಂಡದಲ್ಲಿ ಹತ್ಯಾಕಾಂಡದ ಕುರಿತು ಆಗಿನ ರುವಾಂಡಾ ಅಧ್ಯಕ್ಷ ಜುವೆನಾಲ್ ಹಬ್ಯಾರಿಮಾನ ಅವರನ್ನು 1989 ರಲ್ಲಿ ಎಚ್ಚರಿಸಿದ ಸ್ಯಾಂಟನ್, ಭೀಕರ ಹತ್ಯಾಕಾಂಡವನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರ ಹೊರತಾಗಿಯೂ 1994 ರಲ್ಲಿ ಭೀಕರ ಹತ್ಯಾಕಾಂಡ ನಡೆದು ಸುಮಾರು 8 ಲಕ್ಷ ರುವಾಂಡ್ ಜನತೆ ಕೊಲ್ಲಲ್ಪಟ್ಟಿದ್ದರು.