ಹೊಸದಿಲ್ಲಿ: ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ಗುರುವಾರ ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಸಿಬಿಐ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಪ್ರವೀಣ್ ಸೂದ್ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ಉಸ್ತುವಾರಿಯನ್ನು ಹಸ್ತಾಂತರಿಸಿದರು. ಜೈಸ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ 2 ವರ್ಷಗಳ ಕಾಲ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸೂದ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಸೂದ್ ಕರ್ನಾಟಕ ಕೇಡರ್ ನ 1986ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.