ದೊಡ್ಡಬಳ್ಳಾಪುರ: ಬಿಜೆಪಿ ಜನ ಸ್ಪಂದನಾ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ ಘೋಷಣೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನನ್ನ ಕಚೇರಿಯಲ್ಲಿ ಕೆಲಸ ಕೊಡುವ ಆದೇಶ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿಎಂ ಮತ್ತೆ ತಾರತಮ್ಯ ನಡೆಯನ್ನು ಮುಂದುವರಿಸಿದ್ದಾರೆ.
ಕರಾವಳಿಯಲ್ಲಿ ಸರಣಿ ಕೊಲೆಗಳು ನಡೆದ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿದ ಸಿಎಂ ಬೊಮ್ಮಾಯಿ ಕೇವಲ ಪ್ರವೀಣ್ ನೆಟ್ಟಾರು ಎಂಬ ಹಿಂದುತ್ವ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಪರಿಹಾರ ಧನ ಘೋಷಿಸಿದ್ದರು. ಆದರೆ ಸಮೀಪದಲ್ಲೇ ಇದ್ದ ಮಸೂದ್ ಮನೆಗೆ ತೆರಳದೆ ಜಿಲ್ಲೆಯಿಂದ ಮರಳಿದ್ದರು. ಸಿಎಂ ಅವರ ದ್ವಿಮುಖ ಧೋರಣೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು. ಅವರು ಕೇವಲ ಹಿಂದುತ್ವ ಕಾರ್ಯಕರ್ತರಿಗೆ ಮಾತ್ರ ಮುಖ್ಯಮಂತ್ರಿಯೇ ಎಂದೂ ಜನಸಾಮಾನ್ಯರು ಪ್ರಶ್ನಿಸಿದ್ದರು.
ಇದೀಗ ಕೋಮು ದ್ವೇಷದ ಅಮಲು ತಲೆಗೇರಿಸಿಕೊಂಡು ಮತ್ತೆ ವಿವಾದ ಹುಟ್ಟು ಹಾಕಿರುವ ಸಿಎಂ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ಭೇಟಿ, 25 ಲಕ್ಷ ರೂ. ಪರಿಹಾರ ಮತ್ತು ಕುಟುಂಬಕ್ಕೆ ತನ್ನ ಕಚೇರಿಯಲ್ಲೇ ಕೆಲಸ ಸಿಎಂ ನೀಡಿದ್ದು ತಪ್ಪಲ್ಲ, ಆದರೆ ಇದೇ ರೀತಿ ಆಸುಪಾಸಿನ ಬಡ,ಅಮಾಯಕ ಮುಸ್ಲಿಂ ಯುವಕರಿಬ್ಬರು ಕೋಮುವಾದಿಗಳಿಂದ ಹತ್ಯೆಯಾಗಿದ್ದು, ಅವರ ಕುಟುಂಬಗಳಿಗೂ ಇದೇ ರೀತಿಯ ಪರಿಗಣನೆ ಮುಖ್ಯಮಂತ್ರಿಯಾದ ವ್ಯಕ್ತಿ ಮಾಡದೇ ಈ ಮಟ್ಟದ ತಾರತಮ್ಯ ಮಹಾ ತಪ್ಪು ಎಂದು ನಾಡಿನ ಜನರು ಹೇಳುತ್ತಿದ್ದಾರೆ. ಇಬ್ಬರು ಮುಸ್ಲಿಂ ಯುವಕರ ಕುಟುಂಬಗಳಿಗೆ ಕನಿಷ್ಟ ಸಾಂತ್ವನವನ್ನೂ ಹೇಳದ ಸಿಎಂ ಮಾಡುತ್ತಿರುವ ತಾರತಮ್ಯ ಬಿಜೆಪಿಯ ಕೊಲೆ ರಾಜಕೀಯವಾಗಿದೆ ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.