ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಿದ್ದ ಪೊಲೀಸರು ಸಂಜೆಯಾಗುತ್ತಲೇ ವಶದಲ್ಲಿದ್ದ ಶಂಕಿತರ ಪೈಕಿ ಇಬ್ಬರನ್ನು ಬಂಧಿಸಿದ್ದರು. ಪೊಲೀಸರ ಈ ನಡೆಯೇ ಇದೀಗ ಅನುಮಾನಕ್ಕೆ ಕಾರಣವಾಗಿದೆ.
ಪ್ರವೀಣ್ ಹತ್ಯೆಯಾದ ನಂತರ ಸಾವಿರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್, ಅಂಗಾರ ಅವರನ್ನು ಮುತ್ತಿಗೆ ಹಾಕಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಹತ್ಯೆ ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದರು. ಸಂಜೆಯಾಗುತ್ತಲೇ ವಶದಲ್ಲಿದ್ದ ಶಂಕಿತರ ಪೈಕಿ ಇಬ್ಬರನ್ನು ಬಂಧಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳ್ಳಾರೆಗೆ ಭೇಟಿ ಕೊಡುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಇಬ್ಬರ ಬಂಧನದ ವಿಚಾರವನ್ನು ಹೊರಹಾಕಿದರು. ಸಣ್ಣ ಪುಟ್ಟ ಪ್ರಕರಣದಲ್ಲೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು ಇಂತಹ ದೊಡ್ಡ ಪ್ರಕರಣದಲ್ಲಿ ಒಂದೇ ದಿನಕ್ಕೆ ಆರೋಪಿಗಳನ್ನು ಜೈಲಿಗೆ ಕಳಿಸಿದ್ದು ಹೇಗೆ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ಕೊಲೆ ಪ್ರಕರಣದಲ್ಲಿ ಅವರ ಪಾತ್ರ ಏನು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಇವರು ಆರೋಪಿಗಳೇ ಎಂಬುದನ್ನೂ ತಿಳಿಸಿಲ್ಲ.
ಕಾರ್ಯಕರ್ತರ ಒತ್ತಡಕ್ಕೆ, ವಿಪಕ್ಷಗಳ ಟೀಕೆಗೆ ಗುರಿಯಾಗಿ ರಾಜ್ಯ ಸರ್ಕಾರ ಬೀಸುವ ದೊಣ್ಣೆಯ ಏಟಿನಿಂದ ತಪ್ಪಿಸಿಕೊಳ್ಳಲು ಪೊಲೀಸರು ಇಬ್ಬರನ್ನು ಬಂಧಿಸಿ ಸುಮ್ಮನಾಗಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.