►►NIAಗೆ ಪ್ರಕರಣ ಹಸ್ತಾಂತರಿಸಲಿರುವ ಸ್ಥಳೀಯ ಪೊಲೀಸರು
ಮಂಗಳೂರು: ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಯಾಬ್, ರಿಯಾಝ್, ಬಶೀರ್ ಬಂಧಿತ ಆರೋಪಿಗಳು ಎಂದಿದ್ದಾರೆ. ಬಂಧಿತ ಮೂವರು ಕೂಡ ಸ್ಥಳೀಯರಾಗಿದ್ದು, ಇವರೇ ಪ್ರಮುಖ ಆರೋಪಿಗಳಾಗಿದ್ದಾರೆ ಎಂದವರು ತಿಳಿಸಿದ್ದಾರೆ.
ಹತ್ಯೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು, ಇಂದು ಬೆಳಗ್ಗೆ ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಂಧನ ನಡೆಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಇನ್ನು ಬಂಧಿತರಿಗೆ ಯಾವುದಾದರೂ ಸಂಘಟನೆಗಳ ನಂಟಿನ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಪಿಗಳಿಗೆ ಪಿಎಫ್ಐ ಮತ್ತು ಎಸ್ಡಿಪಿಐ ನಂಟು ಇರುವ ಬಗ್ಗೆ ಈವರೆಗೆ ಯಾವುದೇ ಖಚಿತತೆ ಇಲ್ಲ, ಆದರೆ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇಂದು ಬಂಧನವಾಗಿರುವ ಮೂವರು ಪ್ರಮುಖ ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ಪ್ರಕರಣವನ್ನು ಸ್ಥಳೀಯ ಪೊಲೀಸರು NIA ಗೆ ಹಸ್ತಾಂತರಿಸಲಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.