►ಪ್ರಕರಣ ಎನ್ ಐಎಗೆ ಹಸ್ತಾಂತರದ ಬಗ್ಗೆ ಎಡಿಜಿಪಿ ಹೇಳಿದ್ದೇನು?
ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನವಾಗಲಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ಬಂಧಿಸಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಈ ಸಂಬಂಧ ಮತ್ತೆ ಕೆಲವರನ್ನು ವಿಚಾರಿಸುತ್ತಿದ್ದೇವೆ. ಲಭ್ಯ ಸುಳಿವಿನ ಆಧಾರದಲ್ಲಿ ನಮ್ಮ ತನಿಖಾ ತಂಡ ಆರೋಪಿಗಳಿಗೆ ಬಲೆ ಬೀಸಿದ್ದು, ಪ್ರಮುಖ ಆರೋಪಿ ಸಹಿತ ಎಲ್ಲರನ್ನೂ ಅತೀ ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದರು.
ಪ್ರಕರಣ ಎನ್ ಐಎಗೆ ಹಸ್ತಾಂತರ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಲೋಕ್ ಕುಮಾರ್ , ‘ನಾನು ಮಸೂದ್ ಮತ್ತು ಪ್ರವೀಣ್ ಹತ್ಯೆ ವಿಚಾರವಾಗಿ ಬೆಳ್ಳಾರೆಗೆ ಹೊರಡಲಿದ್ದು, ಅಲ್ಲಿ ಚರ್ಚೆ ನಡೆಸಲಿದ್ದೇನೆ. ಅಲ್ಲಿ ಎನ್ ಐಎ ಅಧಿಕಾರಿಗಳಿದ್ದರೆ ಅವರ ಜೊತೆನೂ ಚರ್ಚೆ ಮಾಡುತ್ತೇವೆ. ಪ್ರಕರಣ ಹಸ್ತಾಂತರದ ಬಗ್ಗೆ ಅಲ್ಲಿ ಮಾತನಾಡುತ್ತೇನೆ. ಆದರೆ ಆರೋಪಿಗಳ ಪತ್ತೆ ವಿಚಾರವಾಗಿ ನಮ್ಮ ಕರ್ತವ್ಯ ಏನಿದೆ ಅದನ್ನೂ ಮಾಡುತ್ತೇವೆ ಎಂದಿದ್ದಾರೆ.