ಇಸ್ಲಾಮ್ ಧರ್ಮದ ಅವಹೇಳನಗೈದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಹರಿಹರ ಪೊಲೀಸ್ ಠಾಣೆಗೆ ಮುತ್ತಿಗೆ, ಲಘು ಲಾಠಿ ಪ್ರಹಾರ

Prasthutha|

ಹರಿಹರ: ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹರಿಹರ ಪೊಲೀಸ್‌ ಠಾಣೆಯ ಎದುರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಸಾವಿರಾರು ಜನರು ಜಮಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

- Advertisement -

ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಸಾವಿರಾರು ಮುಸ್ಲಿಮ್ ಯುವಕರು ನಗರ ಪೊಲೀಸ್ ಠಾಣೆ ಬಳಿ ಜಮಾಯಿಸಿದರು.

ಆಗ ಪಿಎಸ್ಐ ಸುನಿಲ್ ಕುಮಾರ್ ತೇಲಿ ಎಲ್ಲರನ್ನೂ ಸಮಾಧಾನಪಡಿಸಿ, ಆರೋಪಿ ಯುವಕನನ್ನು ಈಗಾಗಲೆ ಬಂಧಿಸಲಾಗಿದ್ದು, ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತ ರೀತಿಯಿಂದ ಮನೆಗೆ ತೆರಳಬೇಕೆಂದು ಮನವಿ ಮಾಡಿದರು.  ಬಳಿಕ ಇನ್ನಷ್ಟು ಜನರು ಠಾಣೆ ಮುಂಭಾಗ ಜಮಾಯಿಸುತ್ತಲೇ ಇದ್ದರು.

- Advertisement -

ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಸಮುದಾಯದ ಮುಖಂಡರನ್ನು, ನಗರಸಭೆ ಸದಸ್ಯರನ್ನು ಠಾಣೆಗೆ ಕರೆಸಿ ಅವರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದರಿಸಲು ಮುಂದಾದಾಗ ಕೆಲ ಕಿಡಿಗೇಡಿಗಳು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಿದ್ದು, ಮುಂಭಾಗದ ಪೂರ್ತಿ ಗಾಜು ಪುಡಿಯಾಗಿದೆ.

ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಬಸವರಾಜ್ ಮತ್ತು ಸಮುದಾಯದ ಮುಖಂಡರು, ಎಲ್ಲರನ್ನೂ ಸಮಾಧಾನಪಡಿಸಿ ಯಾರು ಕೂಡ ತಾಳ್ಮೆ ಕಳೆದುಕೊಳ್ಳಬಾರದು. ಏನಾದರೂ ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಯಾವ ಧರ್ಮವು ಕೂಡ ಕೆಟ್ಟದ್ದನ್ನು ಬೋಧಿಸುವುದಿಲ್ಲ, ಪ್ರತಿಯೊಬ್ಬರೂ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಚ್ಯುತಿಯಾಗದಂತೆ ಬದುಕಬೇಕು. ಮನುಷ್ಯ ಬುದ್ದಿಜೀವಿ, ಸಾಮಾಜಿಕ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಕಾನೂನು ವ್ಯವಸ್ಥೆಯಡಿ ಕ್ರಮ ಕೈಗೊಳ್ಳಬೇಕು. ಹಿಂಸೆ ನಾಗರಿಕತೆಯ ಲಕ್ಷಣವಲ್ಲ ಎಂದು ನೆರೆದಿದ್ದ ಜನರನ್ನು ಡಿವೈಎಸ್ ಪಿ ಸಮಾಧಾನ ಪಡಿಸಿದರು.

ಕೆಲ ಹೊತ್ತಿನಲ್ಲೆ ಪೊಲೀಸ್ ಠಾಣೆ ಎದುರಿನ ಬೀರೂರು ಸಮ್ಮಸಗಿ ರಸ್ತೆಯಲ್ಲಿ ಸಾವಿರಾರು ಜನರು ಸೇರಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜನ-ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಸಿಪಿಐ ಯು.ಸತೀಶ್, ಪಿಎಸ್ಐ ಸುನಿಲ್ ಕುಮಾರ್ ತೇಲಿ, ನಗರಸಭೆ ಉಪಾಧ್ಯಕ್ಷ ಎಂ.ಎಸ್.ಬಾಬೂಲಾಲ್, ಸದಸ್ಯರಾದ ಮುಜಾಮಿಲ್, ಆರ್.ಸಿ.ಜಾವಿದ್, ಸಮಾಜದ ಮುಖಂಡರಾದ ಭಾನುವಳ್ಳಿ ದಾದಾಪೀರ್, ಪಿ.ಕೆ.ಮುಸ್ತಾಫಾ, ಮೊಹಮ್ಮದ್ ಪೈರೋಜ್, ಆಸೀಪ್ ಪೈಲ್ವಾನ್, ಸೈಯದ್ ಸನಾವುಲ್ಲಾ ಮತ್ತಿತರರು ಸ್ಥಳದಲ್ಲಿ ಹಾಜರಿದ್ದು ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸಿದರು.

ಘಟನೆ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸಸರು ರಾತ್ರಿ 8-30 ರಿಂದಲೆ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು.

ಮಾರುತಿ ಎಂಬ ವ್ಯಕ್ತಿ ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ್ದಾನೆ.

ಆರೋಪಿಯನ್ನು ಬಂಧಿಸಲು, ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಸ್ಲಿಂ ಸಮುದಾಯದ ಯುವಕರು ನಗರಠಾಣೆಯ ಮುಂದೆ ರಾತ್ರಿ 8ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆರೋಪಿಯನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಆ ಬಳಿಕವು ಠಾಣೆಯ ಮುಂದೆ ಜನ ಜಮಾಯಿಸಿದ್ದಾರೆಂದು ಪೊಲೀಸರು ಲಾಠೀ ಚಾರ್ಜ್ ಮಾಡಿದ್ದಾರೆ.

ಉದ್ರಿಕ್ತ ಜನರು ಕಲ್ಲು ತೂರಾಟ  ಮಾಡಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ, ಪೊಲೀಸ್ ವಾಹನದ ಗಾಜು ಜಖಂಗೊಳಿಸಿದ್ದಾರೆ ಎಂದು ಬಿಜೆಪಿ ಪರ ಸುದ್ದಿ ಮಾದ್ಯಮಗಳು ವರದಿ ಮಾಡಿದೆ.

Join Whatsapp