ಜನಸಂಖ್ಯೆ ನಿಯಂತ್ರಣ ಮಸೂದೆ

Prasthutha|

ಮಧ್ಯಕಾಲೀನ ಯುಗಕ್ಕೆ ಮೋದಿ ಭಾರತ!

- Advertisement -

ದೇಶದ ಅಭಿವದ್ಧಿಗೆ ಜನಸಂಖ್ಯೆ ಹೆಚ್ಚಳವೇ ಅಡ್ಡಗಾಲು ಎಂಬ ನೆಪದಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಭಾರತದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಉತ್ಸುಕವಾಗಿದೆ. ಸಂಸದ ರವಿಕಿಶನ್ ಇದೀಗ ನಡೆಯುತ್ತಿರುವ ಸಂಸತ್ತು ಅಧಿವೇಶನದಲ್ಲಿ ಈ ಕಾಯ್ದೆಯನ್ನು ಮಂಡಿಸುವ ಸಾಧ್ಯತೆಗಳಿವೆ. ಈ ಕಾಯ್ದೆಯ ಹಿಂದಿರುವುದು ದೇಶದ ಅಭಿವದ್ಧಿಗಿಂತ ಮುಸ್ಲಿಮ್ ವಿರೋಧಿ ಭಾವನೆಯಷ್ಟೇ ಎಂಬುದು ಮಾತ್ರ ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಆಡಳಿತರೂಢ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮ ಅವರು ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಬೇಕು ಎಂಬ ಹೇಳಿಕೆಯ ಬೆನ್ನಲ್ಲೇ ಸಂಸತ್ತಿನಲ್ಲಿ ಜನಸಂಖ್ಯಾನಿಯಂತ್ರಣ ಕಾಯ್ದೆ ಮಂಡನೆಯ ಸೂಚನೆಗಳನ್ನು ಒಕ್ಕೂಟ ಸರ್ಕಾರ ತೇಲಿ ಬಿಟ್ಟಿದೆ. ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆಯ ಹೊಸ್ತಿಲಲ್ಲಿರುವ ಈ ಹೊತ್ತಿನಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಯ ಪ್ರಸ್ತಾಪ ಜನರ ನಾಡಿಮಿಡಿತವನ್ನು ಪರೀಕ್ಷಿಸಲು ಸಾಧ್ಯವಿರಬಹುದೇನೋ?. ಅಸ್ಸಾಂ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಏರುಗತಿಯಲ್ಲಿದೆ ಎಂಬ ಅಸಹನೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿ ಎರಡು ಮಕ್ಕಳ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಮುಸ್ಲಿಂ ದ್ವೇಷದ ನೆಲೆಯಲ್ಲಿ ಹಿಂದೂಗಳ ಧ್ರುವೀಕರಣ ರಾಜಕಾರಣ ಈಗ ಬಿಜೆಪಿಗೆ ಲಾಭದ ರುಚಿಯನ್ನು ತೋರಿಸಿದೆ. ವಿಪಕ್ಷಗಳನ್ನು, ಎದುರಾಡುವ ದನಿಗಳನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಹತ್ತಿಕ್ಕುತ್ತಿರುವ ಮೋದಿ ಸರ್ಕಾರ ಸಿಎಎ/ ಎನ್.ಆರ್.ಸಿ ಕಾಯ್ದೆಗಳ ಮುಂದುವರೆದ ಭಾಗದಂತೆ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಉದ್ದೇಶಿತ ಮಸೂದೆಯ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳಿದ್ದರೆ ಸರ್ಕಾರಿ ನೌಕರಿ ಸಹಿತ ಹಲವು ಸವಲತ್ತುಗಳು ನಿರಾಕರಣೆಗೊಳಪಡುತ್ತವೆ. ಈ ಕಾಯ್ದೆಯ ಹಿಂದಿರುವ ಜನಾಂಗೀಯ ದ್ವೇಷವನ್ನು ಸ್ವತಃ ಬಿಜೆಪಿ ನಾಯಕರುಗಳು ಜಗಜ್ಜಾಹೀರು ಮಾಡುತ್ತಿದ್ದಾರೆ. ಮುಸಲ್ಮಾನರು ತಮ್ಮ ಧರ್ಮದ ಪ್ರಕಾರ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಮೂಲಕ ಹೆಚ್ಚೆಚ್ಚು ಮಕ್ಕಳನ್ನು ಪಡೆದು ತಮ್ಮ ಜನಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದು, ಇದು ಹಿಂದೂಗಳ ಜನಸಂಖ್ಯೆಯ ಇಳಿಮುಖಕ್ಕೆ ಕಾರಣವಾಗಿದೆ ಎಂಬ ವ್ಯಾಖ್ಯಾನ ಮುಂದಿಟ್ಟುಕೊಂಡು ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.

ದೇಶದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಸ್ತುಸ್ಥಿತಿಯ ಅರಿವಿಲ್ಲದ ಯಾವುದೇ ಸರ್ಕಾರ ಧರ್ಮ, ಜಾತಿ ಮುಂದಿಟ್ಟುಕೊಂಡು ನಿರ್ದಯದಿಂದ ಜನರನ್ನು ಆಳಲು ಹವಣಿಸುತ್ತಿರುತ್ತದೆ. ಭಾರತ ಇಂತಹುದ್ದೇ ಸರ್ಕಾರವೊಂದನ್ನು ಮಡಿಲಿಗಿಟ್ಟುಕೊಂಡು ಆರೇಳುವರ್ಷಗಳಿಂದ ಕೊತ ಕೊತ ಬೇಯುತ್ತಿದೆ. 1974ರಲ್ಲಿ 60.88 ಕೋಟಿ ಭಾರತದ ಜನಸಂಖ್ಯೆ ಇತ್ತು. ಅವತ್ತಿನ ಪ್ರಭಾವಿ ನಾಯಕ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಜನಸಂಖ್ಯೆ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಕ್ರಮವನ್ನು ಜಾರಿಗೊಳಿಸಿದರು. ಈ ಸಂದರ್ಭದಲ್ಲಿ ಜನರ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಸಂತಾನಹರಣ ಚಿಕಿತ್ಸೆ ಮಾಡಲಾಯಿತು, ಮದುವೆಯಾಗದ ಪುರುಷರಿಗೂ ಈ ಶಸ್ತ್ರ ಚಿಕಿತ್ಸೆಗೆ ಬಲವಂತವಾಗಿ ಒಳಪಡಿಸಲಾಯಿತು. ಆದರೆ ಇದು ಹೆಚ್ಚು ದಿನ ಮುಂದುವರೆಯಲು ಸಾಧ್ಯವಾಗಲಿಲ್ಲ. ಜನರ ಬದುಕಿನ ಹಕ್ಕನ್ನೆ ಹತ್ತಿಕ್ಕಿದ ಈ ಕ್ರಮಕ್ಕೆ ಕ್ರಮೇಣ ಸಾವಾಯಿತು. 1974 ರಲ್ಲಿ ಕೇವಲ 60.88 ಕೋಟಿ ಇದ್ದ ಭಾರತದ ಜನಸಂಖ್ಯೆ 2021 ರಲ್ಲಿ 138 ಕೋಟಿ ಆಗಲು 47 ವರ್ಷಗಳೇ ಬೇಕಾಗಿದೆ. ಚೀನಾ ದೇಶಕ್ಕೆ ಹೋಲಿಸಿದರೆ ಇದು ಅಂತಹ ಏರಿಕೆಯೇನಲ್ಲ. ‘ಚೀನಾದಲ್ಲಿ ಒಂದು ಕುಟುಂಬ ಒಂದು ಮಗು’ ಎಂಬ ಕಾನೂನು ಜಾರಿಗೆ ತಂದ ಪರಿಣಾಮ ಆ ದೇಶ ಈಗ ಪುರುಷರ ದೇಶವಾಗಿ ಹೆಣ್ಣುಮಕ್ಕಳ ಕೊರತೆಯನ್ನು ಎದುರಿಸುತ್ತಿದೆ. ಇಷ್ಟೇ ಅಲ್ಲ. ಆ ದೇಶ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದನ್ನು ಕಾಣಬಹುದು.

- Advertisement -

ದೇಶದಲ್ಲಿ ಈಗ ಜಾರಿಗೆ ತರಲು ಹೊರಟಿರುವ ಜನಸಂಖ್ಯಾನಿಯಂತ್ರಣ ಕಾಯ್ದೆಯ ಜಾರಿಗೆ ಮುಂಚೆ ಸರ್ಕಾರ ದೇಶದ ಸಮಾಜೋ-ಆರ್ಥಿಕ ಸ್ಥಿತಿಯನ್ನು ಅವಲೋಕಿಸಿದಂತೆ ಕಂಡು ಬರುತ್ತಿಲ್ಲ. ಸಂವಿಧಾನಬದ್ಧವಾಗಿ ನಡೆಯಬೇಕಾದ ಆಡಳಿತ ಧರ್ಮಕ್ಕೆ ಗಂಟು ಬಿದ್ದಾಗ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದಕ್ಕೆ ಅನೇಕ ಉದಾಹರಣೆಗಳು ಕಣ್ಣಮುಂದೆ ಇವೆ. ಅದರಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯೂ ಒಂದು. ಮುಸ್ಲಿಮ್ ಸಮುದಾಯದ ಗಂಡು ಒಂದಕ್ಕಿಂತ ಹೆಚ್ಚು ಮದುವೆ ಆಗುವ ಮೂಲಕ ಹೆಚ್ಚು ಮಕ್ಕಳನ್ನು ಪಡೆಯುವುದರ ಹಿಂದೆ ಧಾರ್ಮಿಕ ನಂಬಿಕೆ ಮತ್ತು ಅನಕ್ಷರತೆ, ಬಡತನದಂತಹ ಕಾರಣಗಳೂ ಇವೆ. ಗ್ರಾಮೀಣ ಪ್ರದೇಶದಲ್ಲಿನ ದಲಿತ ಮತ್ತು ಓಬಿಸಿಯ ಕುಟುಂಬಗಳು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವುದರ ಹಿಂದೆಯೂ ಇಂತಹದ್ದೆ ಕಾರಣಗಳಿವೆ. ದೇಶದಲ್ಲಿ ಪ್ರಸ್ತುತ ಹುಟ್ಟಿದ ನೂರು ಮಕ್ಕಳಲ್ಲಿ 40 ಮಕ್ಕಳು ಸಾವು ಕಾಣುತ್ತಿವೆ. ಐರೋಪ್ಯ ರಾಷ್ಟ್ರಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಶೇ. 1 ರಷ್ಟಿದ್ದರೆ ಭಾರತದಲ್ಲಿ ಈ ಪ್ರಮಾಣ ಶೇ. 40 ರಷ್ಟಿದೆ. ನವಜಾತ ಮಕ್ಕಳ ಸಂರಕ್ಷಣೆಯ ಆರೋಗ್ಯ ವ್ಯವಸ್ಥೆ ಭಾರತದಲ್ಲಿ ಪರಿಪೂರ್ಣವಾಗಿಲ್ಲ. ಹುಟ್ಟಿದ ಮಕ್ಕಳು ಬದುಕುಳಿಯುವ ಖಾತರಿಯಿಲ್ಲ. ಐದು ವರ್ಷದ ವರೆಗೂ ಮಗುವನ್ನು ಕಾಪಾಡಿಕೊಳ್ಳುವ ಆರೋಗ್ಯ ವ್ಯವಸ್ಥೆಯನ್ನು ಭಾರತ ಇಂದಿನವರೆಗೂ ಸಬಲೀಕರಣ ಮಾಡಿಲ್ಲ ಎಂಬುದು ದೇಶದ ಆಡಳಿತಕ್ಕಿಡಿದ ಕನ್ನಡಿಯಾಗುತ್ತದೆ. ಪೋಷಕರು ಒಂದಕ್ಕಿಂತ ಹೆಚ್ಚಿನ ಮಕ್ಕಳ ಪಡೆಯಲು ಮಕ್ಕಳ ಉಳಿಯುವಿಕೆಯ ಅಭದ್ರತೆಯೇ ಬಹುಮುಖ್ಯ ಕಾರಣ. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಗತ್ತಾಗಿ ಒಂದು ಸ್ತ್ರೀರೋಗ ಆಸ್ಪತ್ರೆ ಇರಬೇಕೆಂಬ ನಿಯಮವಿದ್ದರೂ ಭಾರತದ ಅದೆಷ್ಟೋ ಹಳ್ಳಿಗಳಲ್ಲಿ ಸ್ತ್ರೀರೋಗ, ಮಕ್ಕಳ ಸಂರಕ್ಷಣೆಯ ಕೇಂದ್ರಗಳಿರಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆ ಕುಸಿದು ಹೋಗಿರುವುದು ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಜಗಜ್ಜಾಹೀರಾಗಿದ್ದನ್ನು ಇಡೀ ಜಗತ್ತೇ ನೋಡಿತು. ಅಮೆರಿಕ ಮತ್ತಿತರ ದೇಶಗಳು ತಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಶೇ. 10ರಷ್ಟನ್ನು ಮೀಸಲಿಟ್ಟಿದ್ದರೆ ಭಾರತ ತನ್ನ ಜಿಡಿಪಿಯಲ್ಲಿ ಶಿಕ್ಷಣಕ್ಕೆ ಶೇ. 2 ಮತ್ತು ಆರೋಗ್ಯ ಕ್ಷೇತ್ರಕ್ಕೆ ಶೇ. 1ರಷ್ಟು ಮಾತ್ರ ಖರ್ಚು ಮಾಡುತ್ತಿದೆ. ದೇಶದ ಪ್ರಗತಿಯ ದಷ್ಟಿಯಿಂದ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂಬ ವಾದವೇ ಅವಾಸ್ತವಿಕ ಮತ್ತು ಅವೈಜ್ಞಾನಿಕ. ದೇಶದ ಲಿಂಗ ಅನುಪಾತ ಮತ್ತು ಒಟ್ಟಾರೆ ಸಂತಾನೋತ್ಪತ್ತಿಯ ಫಲವತ್ತತೆಯ ಪ್ರಮಾಣ (Total fertility rate)  ವನ್ನು ನೋಡುವಾಗ ಇದು ಸ್ಪಷ್ಟವಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ 1:6 ಇದ್ದ ಸಂತಾನೋತ್ಪತ್ತಿ ಫಲವತ್ತತೆಯ (TFR) ಪ್ರಮಾಣ 2021ಕ್ಕೆ 2:1 ಪ್ರಮಾಣದಲ್ಲಿದೆ. ಅಂದರೆ ಸರಾಸರಿ ಆರು ಮಕ್ಕಳನ್ನು ಹೆರುತ್ತಿದ್ದ ಒಂದು ಹೆಣ್ಣು ಈಗ ಸರಾಸರಿ ಒಂದು ಮಗುವನ್ನು ಹೊಂದಿರುತ್ತಾಳೆ. ಅಲ್ಲಿಗೆ ಜನಸಂಖ್ಯೆ ಪ್ರಮಾಣ ಇಳಿಮುಖವಾಗುತ್ತಾ ಹೋಗುತ್ತಿದೆ. ದೇಶದಲ್ಲಿ 100 ಗಂಡು ಮಕ್ಕಳಿಗೆ 97 ಹೆಣ್ಣುಮಕ್ಕಳಿದ್ದಾರೆ. ಅಂದರೆ ಗಂಡು -ಹೆಣ್ಣಿನ ಸಂಖ್ಯೆಯ ಅನುಪಾತ ಅಸಮತೋಲನವಾಗಿದೆ. ಶಿಕ್ಷಣ, ವೈಜ್ಞಾನಿಕ ತಿಳುವಳಿಕೆಗಳು ಸಂತಾನೋತ್ಪತ್ತಿಯ ಪ್ರಮಾಣದಲ್ಲಿ ಸಹಜವಾಗಿಯೇ ಸಂಯಮವನ್ನು ಕಾದುಕೊಂಡು ಬರುತ್ತಿವೆ. 1982ರಲ್ಲಿ ಶೇ 2.33 ರಲ್ಲಿದ್ದ ಜನಸಂಖ್ಯೆ ಏರಿಕೆ 2020ಕ್ಕೆ ಶೇ.0.99ಕ್ಕೆ ಇಳಿದಿದೆ. 2026ಕ್ಕೆ ದೇಶದ ಜನಸಂಖ್ಯೆ ಪ್ರಮಾಣ 146 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಜನಸಂಖ್ಯೆ ಸ್ಫೋಟಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಈ ಅಂಶವನ್ನು ಆಧರಿಸಿದರೆ ದೇಶದಲ್ಲಿ ಜನಸಂಖ್ಯಾ ಸ್ಫೋಟವೆಂಬುದು ನಿರಾಧಾರ ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು?

ಮೋದಿ ಸರ್ಕಾರ ಮುಸ್ಲಿಮ್ ಸಮುದಾಯದ ಮೇಲಿನ ಹಗೆಯಿಂದ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸಿದ್ದೇ ಆದರೆ ಇಡೀ ದೇಶದ ಜನಸಂಖ್ಯೆ ಅಸಮತೋಲನಕ್ಕೊಳಗಾಗಿ ರಿವರ್ಸ್‌ ಪಾಪ್ಯೂಲೇಶನ್‌ ಗೆ ಕುಸಿಯುವ ಅಪಾಯವನ್ನು ದೇಶ ಎದುರಿಸಬೇಕಾಗುತ್ತದೆ. ಈಗಲೆ ನೆಲಕಚ್ಚಿರುವ ದೇಶದ ಆರ್ಥಿಕತೆ ಇನ್ನಷ್ಟು ಪಾತಾಳಕ್ಕಿಳಿಯಲಿದೆ. ಈ ಕಾಯ್ದೆ ಪ್ರಕಾರ ಒಂದು ಕುಟುಂಬ ಎರಡು ಮಕ್ಕಳನ್ನು ಮಾತ್ರ ಹೊಂದಬೇಕೆಂಬುದರ ಪರಿಣಾಮ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಕ್ರೌರ್ಯಗಳ ಪ್ರಮಾಣ ಹೆಚ್ಚಾಗಲಿದ್ದು, ಲಿಂಗ ಅನುಪಾತದಲ್ಲಿ ಗಣನೀಯ ಅಂತರವಾಗಲಿದೆ. ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ, ಸವಲತ್ತುಗಳಿಲ್ಲ ಎನ್ನುವುದೆ ಅತ್ಯಂತ ಹಾಸ್ಯಾಸ್ಪದ. ಪ್ರತಿವರ್ಷ 2 ಲಕ್ಷ ಉದ್ಯೋಗ ಸಷ್ಟಿಸುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಭಾರತದ ಉದ್ಯೋಗ ವ್ಯವಸ್ಥೆಯನ್ನೇ ದಿಕ್ಕೆಡಿಸಿದ್ದಾರೆ. ಕೋಟ್ಯಂತರ ವಿದ್ಯಾವಂತರು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿದ್ದಾರೆ. ಅವರಿಗೆಲ್ಲಾ ಪಕೋಡ ಮಾರಿ ಎಂದು ಪ್ರಧಾನಿ ಬೋಧಿಸುತ್ತಿರುವಾಗ ಸರ್ಕಾರಿ ನೌಕರಿಗಾಗಿಯೇ ಮಕ್ಕಳನ್ನು ನಿಯಂತ್ರಿಸುವುದು ಯಾವ ಸಾಧನೆ ಎಂಬುದನ್ನು ಪ್ರಧಾನಿಗಳೇ ಹೇಳಬೇಕು.

ಭಾರತದ ಮುಸ್ಲಿಮರನ್ನು ಒಂದು ಬಗೆಯ ಓಲೈಕೆ, ಮತ್ತೊಂದು ಬಗೆಯಲ್ಲಿ ದೌರ್ಜನ್ಯದ ಬಲಿಪಶುಗಳನ್ನಾಗಿ ಮಾಡುತ್ತಲೆ ಬರಲಾಗುತ್ತಿದೆ. ಈ ದೇಶದ ದಲಿತರ ಸಮಸ್ಯೆಗಳು ಮುಸ್ಲಿಮ್ ಸಮುದಾಯ ಎದುರಿಸುತ್ತಿರುವುದಕ್ಕಿಂತ ಅಷ್ಟೇನೂ ಭಿನ್ನವಾಗಿಲ್ಲ. ಮುಸ್ಲಿಮ್ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗಳನ್ನು ಮುಖ್ಯಧಾರೆಯಲ್ಲಿ ಸುಧಾರಿಸುವ ಯಾವ ಕಾರ್ಯಕ್ರಮಗಳನ್ನು ಸರ್ಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಹೊಣೆಗಾರಿಕೆಯನ್ನು ತೋರಿದ್ದಾದರೂ ಯಾವಾಗ ಎಂಬ ಪ್ರಶ್ನೆ ನಮ್ಮ ಮುಂದೆ ಈ ಹೊತ್ತಿಗೂ ಇದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಧರ್ಮಾಧಾರಿತ ಆಡಳಿತ ಧೋರಣೆಗಳು ಕಾಯ್ದೆ ರೂಪದಲ್ಲಿ ಹೇರಲ್ಪಡುತ್ತಲೆ ಮುಂದುವರೆದಿದೆ. ಅಭಿವೃದ್ದಿಯ ಹೆಸರಿನಲ್ಲಿ ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಾ ಬರುತ್ತಿರುವುದು ಜನಾಂಗೀಯ ದ್ವೇಷ, ವಿಭಜನೆ, ರೈತ, ಕಾರ್ಮಿಕರ ವಿರೋಧಿ ಆಡಳಿತವಷ್ಟೇ. ಸಂವಿಧಾನದ ಮೌಲ್ಯಗಳಿಗೆ ಎಂದೋ ಎಳ್ಳು- ನೀರು ಬಿಟ್ಟಿದೆ. ಯಾವುದೇ ಬದಲಾವಣೆಗಳನ್ನು, ಜನರ ಕಲ್ಯಾಣ ಕಾನೂನುಗಳನ್ನು ಜನರಿಗೆ ಶಿಕ್ಷಣ ಕೊಡುವ ಮೂಲಕ ಅನುಷ್ಠಾನಗೊಳಿಸಬೇಕೇ ವಿನಃ ಬಲವಂತದಿಂದ ಸಾಧ್ಯವಿಲ್ಲ. ಅದು ಧರ್ಮ, ದೇವರು, ಜಾತಿಗಳ ವಿರೋಧಿ ನೆಲೆಯಲ್ಲಿ ಅನುಷ್ಠಾನಗೊಳಿಸುವುದು ದೂರಗಾಮಿ ಪರಿಣಾಮವನ್ನು ಬೀರುವುದಿಲ್ಲ. ಬದಲಿಗೆ ದೇಶವನ್ನು ಮಧ್ಯಯುಗಕ್ಕೆ ಕೊಂಡೊಯ್ಯುವ ಹಿಮ್ಮುಖ ನಡೆಯಾಗುತ್ತದೆ. ನರೇಂದ್ರ ಮೋದಿ ನೇತತ್ವದ ಒಕ್ಕೂಟ ಸರ್ಕಾರ ದೇಶವನ್ನು ಅನಾದಿಕಾಲಕ್ಕೆ ತಳ್ಳಿಕೊಂಡು ಹೊರಟಿದೆ.

Join Whatsapp