ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ನಾಯಕ ಮೌಲಾನಾ ಉಸ್ಮಾನ್ ಬೇಗ್ ರಶಾದಿ ನಿಧನ

Prasthutha|

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ, ಮುಸ್ಲಿಮ್ ವಿದ್ವಾಂಸರ ರಾಷ್ಟ್ರೀಯ ಸಂಘಟನೆಯಾಗಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಸ್ಥಾಪಕಾಧ್ಯಕ್ಷ ಮೌಲಾನಾ ಉಸ್ಮಾನ್ ಬೇಗ್ ರಶಾದಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

- Advertisement -

ವಯೋಸಹಜ ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ರಾತ್ರಿ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಹಲವು ವರ್ಷಗಳ ಕಾಲ ಸದಸ್ಯರಾಗಿದ್ದ ಮೌಲಾನ ರಶಾದಿ, ಅತ್ಯುತ್ತಮ ವಾಗ್ಮಿಯೂ ಸಂಘಟಕರೂ ಆಗಿದ್ದರು. ರಾಷ್ಟ್ರಾದ್ಯಂತ ಸಂಘಟನೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದ ಮೌಲಾನಾ, ಮುಸ್ಲಿಮ್ ಸಮುದಾಯದಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

- Advertisement -

ಪ್ರಮುಖ ಧಾರ್ಮಿಕ ವಿದ್ವಾಂಸರಾಗಿದ್ದ ಮೌಲಾನಾ ರಶಾದಿ ಅವರು ಶಿವಾಜಿನಗರದ ಹರಿ ಮಸ್ಜಿದ್ ನಲ್ಲಿ ದೀರ್ಘಕಾಲ ಇಮಾಮ್ ಆಗಿ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ ಬೆಂಗಳೂರಿನ ಇತರ ಮಸೀದಿಗಳಲ್ಲೂ ಇಮಾಮ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ನಾಲ್ವರು ಪುತ್ರರು, ಪತ್ನಿ ಸೇರಿ ಅಪಾರ ಬಂಧುಮಿತ್ರರು, ಸ್ನೇಹಿತರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದಕ್ಕೂ ಮೊದಲು ಮಾಗಡಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೌಲಾನಾ ರಶಾದಿ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೌಲಾನಾ ಉಸ್ಮಾನ್ ಬೇಗ್ ರಶಾದಿ ಅವರ ನಿಧನ ಭಾರತೀಯ ಮುಸ್ಲಿಮರಿಗೆ ತುಂಬಲಾರದ ನಷ್ಟವಾಗಿದೆ. ಪ್ರಖಂಡ ವಿದ್ವಾಂಸರೂ, ಸಾಮಾಜಿಕ ಹೋರಾಟಗಾರರೂ, ಸಂಘಟಕರೂ ಆಗಿದ್ದ ಮೌಲಾನ ತಮ್ಮ ಜೀವನದ ಕೊನೆಯವರೆಗೂ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ದೇಶಾದ್ಯಂತ ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ನಿಧನದಿಂದ ದೇಶ, ಅತ್ಯುತ್ತಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ ದಯಪಾಲಿಸಲಿ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.



Join Whatsapp