IPL-2021 ಕ್ವಾಲಿಫೈಯರ್-1: ಫೈನಲ್ ಟಿಕೆಟ್’ಗಾಗಿ ಗುರು-ಶಿಷ್ಯರ ಫೈಟ್

Prasthutha|

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್-14ರಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಲೀಗ್ ಹಂತದ ಅಭಿಯಾನ ಕೊನೆಗೊಳಿಸಿರುವ ಎಂಎಸ್ ಧೋನಿ‌ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಕ್ವಾಲಿಫಯರ್-1 ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

- Advertisement -

ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ. ಸೋಲುವ ತಂಡ ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧ ಪಂದ್ಯವನ್ನಾಡಬೇಕಿದೆ.
ಲೀಗ್ ಹಂತದಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಆದರೆ ಎರಡೂ ಬಾರಿ ರಿಷಭ್ ಪಂತ್ & ಟೀಮ್ ತಮ್ಮ ‘ಗುರು’ವಿನ ಬಳಗಕ್ಕೆ ಸೋಲಿನ ರುಚಿ ತೋರಿಸಿದ್ದಾರೆ.

ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಷ್ಟೆ ಡೆಲ್ಲಿ ಕ್ಯಾಪಿಟಲ್ಸ್ ಸೋಲನುಭವಿಸಿದ್ದು, 10 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಚೆನ್ನೈ ಆಡಿದ 14 ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆಲುವು ಸಾಧಿಸಿದ್ದು ಐದರಲ್ಲಿ ಸೋತಿದೆ.

- Advertisement -

ಕಳೆದ ಬಾರಿ ಫೈನಲ್’ನಲ್ಲಿ ಮುಂಬೈ ಎದುರು ಮಂಡಿಯೂರಿದ್ದ ಡೆಲ್ಲಿ ಈ ಬಾರಿ ಟ್ರೋಫಿ ಜಯಿಸುವ ಛಲದಲ್ಲಿದೆ.
ಮತ್ತೊಂದೆಡೆ ಕಳೆದ ಬಾರಿ ಕ್ವಾಲಿಫಯರ್ ಕಾಣದೇ ಹೊರ ನಡೆದು ತೀವ್ರ ಮುಜುಗರಕ್ಕೆ ಒಳಗಾಗಿದ್ದ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಚಾಂಪಿಯನ್ ಆಗಲು ಶತಾಯಗತಾಯ ಪ್ರಯತ್ನಿಸುವುದು ನಿಶ್ಚಿತ.
ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ತಂಡದ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸ್ಸಿ ಭರ್ಜರಿ ಫಾರ್ಮ್’ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಆದರೆ ಮೊಯಿನ್ ಅಲಿ, ನಾಯಕ ಧೋನಿ ಬ್ಯಾಟ್’ನಿಂದ ರನ್ ಬಾರದೇ ಇರುವುದು ಬೇಸರದ ಸಂಗತಿ .
ಮತ್ತೊಂದೆಡೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದಿನ ಪಂದ್ಯದಲ್ಲಿ ಫೇವರಿಟ್ ಪ್ಲೇಸ್ ನಲ್ಲಿದೆ.

Join Whatsapp