ಆರೋಪಿತ ಕ್ರಿಮಿನಲ್ ನಾಯಕರು ಮತ್ತು ಅಧಿಕಾರಿಗಳಿಗೆ ನೆರವಾಗಲು ಬಿಜೆಪಿಯಿಂದ ಅಧಿಕಾರ ದುರ್ಬಳಕೆ : ಪಾಪ್ಯುಲರ್ ಫ್ರಂಟ್

Prasthutha|

ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ತನ್ನ ಕ್ರಿಮಿನಲ್ ನಾಯಕರು ಮತ್ತು ಅಧಿಕಾರಿಗಳಿಗೆ ನೆರವಾಗಲು ಬಿಜೆಪಿ ರಾಜ್ಯ ಸರಕಾರಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೇರ್ಮನ್ ಓ.ಎಂ.ಎ ಸಲಾಂ ಹೇಳಿದ್ದಾರೆ.

- Advertisement -

ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದ ಆರೋಪಿಗಳಾಗಿರುವ ಮತ್ತೆ ಮೂರು ಮಂದಿ ಪೊಲೀಸರನ್ನು ಖುಲಾಸೆಗೊಳಿಸಲು ಅಹ್ಮದಾಬಾದ್ ವಿಶೇಷ ಸಿಬಿಐ ಕೋರ್ಟ್ ನಿರ್ಧರಿಸಿದೆ. ಈ ಖುಲಾಸೆಯೊಂದಿಗೆ 2004ರ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಯಾಗಿದ್ದಾರೆ.

- Advertisement -

ಮಾಜಿ ಐಜಿ ಡಿ.ಜಿ.ವಂಝರಾ, ಪಿ.ಪಿ.ಪಾಂಡೆ ಮತ್ತು ಎನ್.ಕೆ. ಅಮೀನ್ ರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂಬುದು ಗಮನಾರ್ಹ. ಸಿಬಿಐ ಈ ನಿರ್ಧಾರದ ವಿರುದ್ಧ ಮನವಿ ಸಲ್ಲಿಸುವವರೆಗೂ, ಇವರೆಲ್ಲರ ವಿರುದ್ಧ ವಿಚಾರಣೆ ನಡೆಯದು ಎಂಬ ಸಂಗತಿ ಇದೀಗ ಬಹುತೇಕ ಖಚಿತವಾಗಿದೆ. ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣವು ಹಲವಾರು ನಕಲಿ ಎನ್ ಕೌಂಟರ್ ಹತ್ಯೆ ಘಟನೆಗಳ ಪೈಕಿ ಒಂದಾಗಿದ್ದು, ಇದು ಅಮಿತ್ ಶಾ ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ವೇಳೆ ನಡೆದಿತ್ತು. 

ಒಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್  ಮತ್ತೊಂದು ಕೋರ್ಟ್ ಆದೇಶಿತ ವಿಶೇಷ ತನಿಖಾ ತಂಡದಿಂದ ನಡೆದ ಕನಿಷ್ಟ ಎರಡು ತನಿಖೆಗಳು ಎನ್ ಕೌಂಟರ್ ನಡೆಸಲಾಗಿತ್ತು ಮತ್ತು ಇಶ್ರತ್ ಗೆ ಭಯೋತ್ಪಾದನಾ ಸಂಪರ್ಕವಿರಲಿಲ್ಲ ಎಂಬ ವಾಸ್ತವವನ್ನು ಕಂಡುಕೊಂಡಿದ್ದವು. ಆದುದರಿಂದ, ಈ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವ ಕ್ರಮವು ಕೇಂದ್ರೀಯ ಏಜೆನ್ಸಿಗಳು ತಮ್ಮ ರಾಜಕೀಯ ಪ್ರಭುಗಳ ಸೂಚನೆಯ ಮೇರೆಗೆ ನಡೆಸಿದ ಉದ್ದೇಶಪೂರ್ವಕ ಕರ್ತವ್ಯ ಉಲ್ಲಂಘನೆ ಮತ್ತು ಇದರ ಮೂಲಕ ನ್ಯಾಯದ ಗಂಭೀರ ಅಣಕ ಮಾಡಲಾಗಿದೆ ಎಂಬುದು ಸ್ಟಷ್ಟವಾಗಿದೆ.

ಮತ್ತೊಂದು ಸನ್ನಿವೇಶದಲ್ಲಿ, ಮುಝಪ್ಫರ್ ನಗರದ ಸ್ಥಳೀಯ ನ್ಯಾಯಾಲಯವು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಶಾಸಕ ಸಂಗೀತ್ ಸೋಮ್ ಮತ್ತು ಸಾಧ್ವಿ ಪ್ರಾಚಿ ಸಹಿತ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಅನುಮತಿಸಿದೆ. ಕುಖ್ಯಾತ ಮಹಾ ಪಂಚಾಯತ್ ನಲ್ಲಿ ಈ ನಾಯಕರು ಮಾಡಿದ ದ್ವೇಷ ಭಾಷಣಗಳು, ಆ ದಿನಗಳಲ್ಲಿ ಮುಝಪ್ಫರ್ ನಗರದ ವಿವಿಧ ಪ್ರದೇಶಗಳಲ್ಲಿ ಅಮಾಯಕರ ಹತ್ಯೆ, ವಿನಾಶ ಮತ್ತು ಹಲವಾರು ಮಂದಿ ಸಾಮೂಹಿಕ ವಲಸೆಯೊಂದಿಗೆ ನೇರ ಸಂಪರ್ಕವನ್ನು ಹೊಂದಿವೆ. ಇದರ ಹೊರತಾಗಿಯೂ, ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಯಿತು.

ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಮತ್ತು ಮುಝಪ್ಫರ್ ನಗರ ಗಲಭೆ ಇವೆರಡು ಕೂಡ ಬಿಜೆಪಿಗೆ ಬಹುದೊಡ್ಡ ಲಾಭವನ್ನು ತಂದುಕೊಟ್ಟಿದೆ. ಬಿಜೆಪಿ ಸರಕಾರಗಳು ಮತ್ತು ಕೇಂದ್ರೀಯ ಏಜೆನ್ಸಿಗಳು ಈ ಅಪರಾಧಗಳಲ್ಲಿ ಭಾಗಿಯಾಗಿರುವ ತನ್ನ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ರಕ್ಷಣೆಗೆ ಇದೀಗ ಜೊತೆಗೂಡಿ ಕೆಲಸ ಮಾಡುತ್ತಿವೆ.

ಈ ಕ್ರಮಗಳು ಅಮಾಯಕರ ಹತ್ಯೆಗಳಿಗೆ ಉತ್ತೇಜನ ನೀಡುವುದು ಮಾತ್ರವಲ್ಲದೇ, ಇವು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಲಿವೆ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು, ಈ ವಿಚಾರವನ್ನು ದೇಶದ ಜನರು ಮತ್ತು ಉನ್ನತ ನ್ಯಾಯಾಲಯದ ಮುಂದೆ ತರಬೇಕೆಂದು ಪಾಪ್ಯುಲರ್ ಫ್ರಂಟ್ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಕರೆ ನೀಡಿದೆ.

Join Whatsapp