ಬೆಳಗಾವಿ: ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿ ಮೃತದೇಹವನ್ನು ರೈಲ್ವೇ ಹಳಿ ಬಳಿ ಎಸೆದಿರುವ ಘಟನೆಯ ಹಿಂದೆ ಶ್ರೀರಾಮ ಸೇನೆಯ ಕೈವಾಡ ಕೇಳಿಬಂದಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಹಿಂದುತ್ವವಾದಿ ಸಂಘಟನೆ ರಾಮ ಸೇನೆಯ ಕಾರ್ಯಕರ್ತರು ಅರ್ಬಾಝ್ ಎಂಬ ಯುವಕನಿಗೆ ನಿರಂತರ ಕೊಲೆ ಬೆದರಿಕೆ ಹಾಕುತ್ತಿದ್ದರು. ರಾಮ ಸೇನೆಯ ಕಾರ್ಯಕರ್ತರು ಸೆಪ್ಟಂಬರ್ 28ರಂದು ಭೇಟಿಯಾಗಲು ಅರ್ಬಾಝ್ ನನ್ನು ಕರೆಸಿಕೊಂಡಿದ್ದರು. ಆದರೆ ಆ ನಂತರ ಒಂದು ಘಂಟೆಯ ಬಳಿಕ ಆತನ ಮೃತದೇಹ ಬೆಳಗಾವಿಯ ಖಾನಾಪುರದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಸುದ್ದಿ ದೊರಕಿದೆ. ಇದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಸ್ವತಃ ಕುಟುಂಬಸ್ಥರು ಕೂಡ ಗಂಭೀರ ಆರೋಪ ಮಾಡಿದ್ದಾರೆ. ಕೈಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಅರ್ಬಾಝ್ ಮೃತದೇಹ ಪತ್ತೆಯಾಗಿರುವುದನ್ನು ಗಮನಿಸಿದರೆ ಇದೊಂದು ವ್ಯವಸ್ಥಿತವಾದ ಕೊಲೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈ ಮಧ್ಯೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದು ಹೇಳಲಾಗುತ್ತಿದ್ದರೂ, ಇನ್ನು ಕೂಡ ಆರೋಪಿಗಳ ವಿರುದ್ಧ ಎಫ್.ಐ.ಆರ್.ದಾಖಲಿಸಲಾಗಿಲ್ಲ. ಅಲ್ಪಸಂಖ್ಯಾತರನ್ನು ಗುರಿಪಡಿಸಿಕೊಂಡು ಸಂಘಪರಿವಾರದ ಸಂಘಟನೆಗಳು ಹಲ್ಲೆ, ಹತ್ಯೆಗಳನ್ನು ನಡೆಸುತ್ತಿರುವ ಘಟನೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಆಡಳಿತ ವರ್ಗವು ಈ ಬಗ್ಗೆ ಕ್ರಮಕೈಗೊಳ್ಳದಿರುವುದು ದುಷ್ಕರ್ಮಿಗಳಿಗೆ ಇಂತಹ ದುಷ್ಕೃತ್ಯಗಳನ್ನು ನಡೆಸಲು ಮತ್ತಷ್ಟು ನೈತಿಕ ಸ್ಥೈರ್ಯವನ್ನು ತುಂಬುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರೇಮ ಸಂಬಂಧದ ಆರೋಪದಲ್ಲಿ ಯುವಕನನ್ನು ಅಮಾನವೀಯವಾಗಿ ಹತ್ಯೆಗೈದಿರುವುದು ಖಂಡನಾರ್ಹ. ಗಂಭೀರ ಆರೋಪ ಎದುರಿಸುತ್ತಿರುವ ರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಮತ್ತು ಈ ಘಟನೆಯ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಧನವನ್ನು ಘೋಷಿಸಬೇಕೆಂದು ನವೀದ್ ಕಟಗಿ ಒತ್ತಾಯಿಸಿದ್ದಾರೆ. ಅದೇ ರೀತಿ ಸಂತ್ರಸ್ತ ಕುಟುಂಬದ ಕಾನೂನು ಹೋರಾಟಕ್ಕೆ ಸಂಘಟನೆ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರು; ರಾಜ್ಯ ರಾಜಕಾರಣದ ಪರ್ಯಾಯ ಶಕ್ತಿಯಾಗಿದ್ದ ಲೋಕಶಕ್ತಿಗೆ ಮತ್ತೆ ಚಾಲನೆ ದೊರೆತಿದೆ. ಕಾಂಗ್ರೆಸ್ – ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ರಾಜ್ಯದಲ್ಲಿ ಪಕ್ಷ ಸಂಘಟಿಸಲು ತೀರ್ಮಾನಿಸಲಾಗಿದೆ.
ನಗರದ ಮೌರ್ಯ ಸರ್ಕಲ್ ಬಳಿಯ ತಾಮರ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಸಮ್ಮುಖದಲ್ಲಿ ರಾಜ್ಯದಲ್ಲಿ ಮತ್ತೆ ಲೋಕಜನಶಕ್ತಿ ಪಕ್ಷವನ್ನು ಸಂಘಟನೆ ಮಾಡಲು ಪಣತೊಡಲಾಗಿದೆ. ಸಿಂಧಗಿ, ಹಾನಗಲ್ ಸೇರಿದಂತೆ ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಜಾತಿ ಆಧಾರಿತ ರಾಜಕಾರಣ ಹೊರತುಪಡಿಸಿ ಜಾತ್ಯತೀತ ತತ್ವ ಸಿದ್ಧಾಂತ, ಸಹಬಾಳ್ವೆಯ ತತ್ವಗಳ ಆಧಾರದ ಮೇಲೆ ಪಕ್ಷವನ್ನು ಮುನ್ನಡೆಸಲು ಮತ್ತು ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಪರಂಪರೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ.
ಲೋಕಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಿಮಿಯ, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಶಾಮಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ಪಾಲ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಚಿಕ್ಕಾರೆಡ್ಡಿ, ರಾಜ್ಯಾಧ್ಯಕ್ಷ ಚಂದ್ರಶೇಖರ ವಿಸ್ತಾವ್ ಮಠ್, ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವಿರೇಶ್, ಉಪಾಧ್ಯಕ್ಷ ನಂದೀಶ್, ಹಿರಿಯ ಉಪಾಧ್ಯಕ್ಷ ಅಬ್ದುಲ್ ಬಶೀರ್, ಕೆ.ಎಲ್. ಪಾಲಾಕ್ಷಯ್ಯ ಮತ್ತಿತರ ಸಮ್ಮುಖದಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ,.
ಮುಂಬರುವ ಜಿಲ್ಲಾ ತಾಲ್ಲೂಕು, ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳರಲು ಮುಂದಾಗಿದೆ. ಇದೀಗ ಮತ್ತೆ ಉತ್ತರ ಕರ್ನಾಟಕ ಒಳಗೊಂಡಂತೆ ರಾಜ್ಯಾದ್ಯಂತ ಪಕ್ಷವನ್ನು ಕಟ್ಟಲು ನಿರ್ಧರಿಸಲಾಗಿದೆ.
ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವಿರೇಶ್ ಮಾತನಾಡಿ, ಪ್ರಸ್ತುತ ರಾಜಕೀಯ ಸನ್ನಿವೇಶಗಳು ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಾಕಷ್ಟು ದ್ವಂದ್ವ ಮತ್ತು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿವೆ. ಜನರ ಅಶೋತ್ತರಗಳಿಗೆ ಸ್ಪಂದಿಸಿದ ಸರ್ಕಾರಗಳು ಇಂದು ಜನರ ಬದುಕನ್ನು ದುಸ್ಥಿತಿಗೆ ದೂಡಿವೆ. ರಾಜಕೀಯ ಅಸ್ಥಿರತೆ ಒಂದೇಡೆಯಾದರೆ ಮತ್ತೊಂದಡೆ ಆರ್ಥಿಕ ಸಂಕಷ್ಟ. ಈ ಒಂದು ಸನ್ನಿವೇಶದಿಂದ ಹೊರಬೇಕಾಗಿರುವುದು ಪ್ರಥಮ ಆದ್ಯತೆಯಾಗಿದೆ ಎಂದರು.
ಭಾಷೆ ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಿದ ಪಕ್ಷವಾಗಿ “ಲೋಕಶಕ್ತಿ” ಹೊರಹೊಮ್ಮಿ 1998 ರ ಲೋಕಸಭಾ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಚಿಕ್ಕೋಡಿ ಬಾಗಲಕೋಟೆ ಹಾಗೂ ಧಾರವಾಡ ದಕ್ಷಿಣ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ತನ್ನ ಪ್ರಾಬಲ್ಯ ಮೆರೆದಿತ್ತು.
ಇದೀಗ ಮತ್ತೊಮ್ಮೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.