ಮುಂಬೈ, ಆ.2: ಮಹಾರಾಷ್ಟ್ರ ಮಾಜಿ ಸಚಿವ ಶಿವಸೇನೆಯ ಸಂಜಯ್ ರಾಥೋಡ್ ಮತ್ತು ಆತ್ಮಹತ್ಯೆ ಮಾಡಿಕೊಂಡ 22ರ ತರುಣಿ ಪೂಜಾ ಚವಾಣ್ ನಡುವೆ ಸಾಕಷ್ಟು ಬಾರಿ ಫೋನ್ ಮಾತುಕತೆ ನಡೆದಿರುವುದು ಪೂನಾ ಪೋಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪೂಜಾಳ ಸಾವಿನ ಮೂರ್ನಾಲ್ಕು ದಿನ ಮೊದಲು ನಡೆದ ಈ ಮಾತುಕತೆ ಆಕೆಯ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು ಒಂದು ಮಾತುಕತೆ ಸುಮಾರು 90 ನಿಮಿಷಗಳ ಕಾಲ ನಡೆದಿರುವುದು ಪತ್ತೆಯಾಗಿದೆ. ಪೂಜಾ ಫೆಬ್ರವರಿ 7ರಂದು ಪುಣೆಯ ಒಂದು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವತ್ ಮಲ್ ಜಿಲ್ಲೆಯ ದಿಗ್ರಾಸಿ ಕ್ಷೇತ್ರದಿಂದ ಮೂರು ಬಾರಿ ಶಿವಸೇನೆ ಶಾಸಕರಾಗಿ ಆಯ್ಕೆಯಾಗಿರುವ ಸಂಜಯ್ ಅವರು ಫೆಬ್ರವರಿ 28ರಂದು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪೂಜಾಳ ಮೊಬೈಲಲ್ಲಿ ಸೆರೆಯಾದ ಧ್ವನಿಯು ರಾಥೋಡರದ್ದೇ ಎಂದು ಪೊಲೀಸರು ಧ್ವನಿ ಸಾಮ್ಯತೆಯಿಂದ ತಿಳಿದುಕೊಂಡಿದ್ದಾರೆ. ಅದು ಬಂಜಾರ ಭಾಷೆಯಲ್ಲಿದೆ. ಪೊಲೀಸರು ಈಗ ಅದರ ಸರಿಯಾದ ಅನುವಾದ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಪೂಜಾ ಅವರು ರಾಥೋಡರ ಬಂಜಾರ ಬುಡಕಟ್ಟು ಸಮುದಾಯಕ್ಕೆ ಸೇರಿದವದ್ದಾರೆ. ಬೀಡ್ ಮೂಲದ ಪೂಜಾ ಪೂನಾದಲ್ಲಿ ಒಂದು ಕೋರ್ಸ್ ಮಾಡಲು ಬಂದಿದ್ದು, ಆಕೆಯ ಆತ್ಮಹತ್ಯೆಯ ಬೆನ್ನಿಗೆ ಸದರಿ ಶಾಸಕರೊಂದಿಗೆ ಆಕೆ ಸಂಬಂಧ ಹೊಂದಿದ್ದರು ಎಂದು ಗುಲ್ಲು ಕೇಳಿಬಂದಿತ್ತು.
ಪೂಜಾಳ ಮೊಬೈಲ್ ನಲ್ಲಿ ರೆಕಾರ್ಡ್ ಆದ ಮಾತುಕತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪೂನಾದ ಫೊರೆನ್ಸಿಕ್ ಸಯನ್ಸ್ ಲ್ಯಾಬೋರೆಟರಿಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನೊಂದು ಸಿಸಿಟೀವಿ ದೃಶ್ಯವನ್ನು ಸಹ ಫೊರೆನ್ಸಿಕ್ ತನಿಖೆಗೆ ಕಳುಹಿಸಲಾಗಿದೆ. ಪೂಜಾಳ ಸಾವಿಗೆ 24 ಗಂಟೆ ಮೊದಲು ಯಾವತ್ಮಲ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆವರಣದ ಫೆಬ್ರವರಿ 6ನೇ ತಾರೀಕಿನ ದೃಶ್ಯ ಇದಾಗಿದೆ. ಈ ಸಿಸಿಟೀವಿ ವೀಡಿಯೋದಲ್ಲಿ ಪೂಜಾಳು ಸಂಜಯ್ ರಾಥೋಡರ ಖಾಸಾ ದೋಸ್ತ್ ಅರುಣ್ ರಾಥೋಡ್ ಜೊತೆಗೆ ಇರುವುದು ತಿಳಿದು ಬಂದಿದೆ.