ದೇಶ ಪ್ರೇಮ – ದೇಶದ್ರೋಹ: ಬದಲಾದ ವ್ಯಾಖ್ಯಾನ

Prasthutha|

ಭಾರತದಲ್ಲಿ ದೇಶಪ್ರೇಮ ಮತ್ತು ದೇಶದ್ರೋಹದ ನಡುವಿನ ಅಂತರ ಕಡಿಮೆಯಾಗುತ್ತಿದೆ. ಇವೆರಡೂ ವೈರುಧ್ಯದ ಪದಗಳಾದರೂ ಅವುಗಳ ನಡುವಿನ ಗೆರೆ ತೆಳುವಾಗುತ್ತಾ ಬರುತ್ತಿದೆ. ಅದರಲ್ಲೂ ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಈ ತೆಳು ಗೆರೆ ಕೂಡ ಕಣ್ಣಿಗೆ ಕಾಣಿಸದಷ್ಟು ಸವೆದಿದೆ.

- Advertisement -

2016ರ ಆಗಸ್ಟ್‌ ನಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಮಾನವಹಕ್ಕು ಸಂಘಟನೆಯು ಬೆಂಗಳೂರಿನಲ್ಲಿ ಮಾನವ ಹಕ್ಕುಗಳಿಗಾಗಿನ ಹೋರಾಟದ ಭಾಗವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಭಾರತೀಯ ಸೇನೆಯು ಕಾಶ್ಮೀರದಲ್ಲಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲಿ ಜಾಗತಿ ಮೂಡಿಸುವ ಕಾರ್ಯಕ್ರಮವಾಗಿತ್ತು ಅದು. ಅದರಲ್ಲಿ ಸ್ವತಃ ದೌರ್ಜನ್ಯಕ್ಕೆ ತುತ್ತಾದ ಸಂತ್ರಸ್ತರ ಕುಟುಂಬದವರೇ ತಮ್ಮ ರೋದನವನ್ನು ಜನರ ಮುಂದೆ ತೆರೆದಿಟ್ಟರು. ಕಾರ್ಯಕ್ರಮದ ಕೊನೆಗೆ ಆಝಾದಿ ಘೋಷಣೆಯೂ ಮೊಳಗಿಸಲಾಗಿತ್ತು. ಈ ಕಾರ್ಯಕ್ರಮವು ಕರ್ನಾಟಕ ಸರಕಾರದ ದಷ್ಟಿಯಲ್ಲಿ ದೇಶದ್ರೋಹ ಪ್ರಕರಣವಾಗಿ ಪರಿಗಣಿಸಲ್ಪಟ್ಟಿತ್ತು. ಮಾನವ ಹಕ್ಕು ಸಂಘಟನೆಯ ಮೇಲೆಯೇ ದೇಶದ್ರೋಹ ಪ್ರಕರಣ ದಾಖಲಿಸಲಾಯಿತು. ವಾಸ್ತವದಲ್ಲಿ ಆ ಕಾರ್ಯಕ್ರಮಕ್ಕೆ ನುಗ್ಗಿ ದಾಂಧಲೆ ನಡೆಸಿ ಭಾರತ್ ಮಾತಾಕಿ ಜೈ ಎಂದು ಜೈಕಾರ ಕೂಗುತ್ತಾ ಭಾರತೀಯರ ಮೇಲೆ ಪ್ರಭುತ್ವ ನಡೆಸುತ್ತಿರುವ ದೌರ್ಜನ್ಯವನ್ನು ಸಮರ್ಥಿಸಿದವರು ಎಬಿವಿಪಿ ದಾಂಧಲೆಕೋರರು. ಆದರೆ ಇಲ್ಲಿ ಯಾವುದು ದೇಶ, ಯಾವುದು ದೇಶಪ್ರೇಮ, ಮಾನವಪರ ಕಾಳಜಿ ಎಂದರೇನು? ಇವೆಲ್ಲವೂ ಅರ್ಥಹೀನಗೊಂಡವು. ಕರ್ನಾಟಕದಲ್ಲಿ ಈ ಹಿಂದೆ ಪೊಲೀಸರ ಮುಷ್ಕರಕ್ಕೆ ಕರೆ ನೀಡಿದ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರ ಮೇಲೂ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಅಂದರೆ ಪ್ರಜಾತಂತ್ರ ವ್ಯವಸ್ಥೆಯ ಅಂತಃಸತ್ವ ಆಗಿರುವ ಪ್ರತಿಭಟನೆ, ಹಕ್ಕು ನ್ಯಾಯಕ್ಕಾಗಿನ ಹೋರಾಟ ಹಕ್ಕೊತ್ತಾಯ, ಟೀಕೆ ವಿಮರ್ಶೆಗಳು ದೇಶದ್ರೋಹ ಎನಿಸಿಕೊಳ್ಳುವುದಾದರೆ ದೇಶ ಎಂಬುದರ ವ್ಯಾಖ್ಯಾನವನ್ನೇ ಬದಲಾಯಿಸಿ ಸಾವರ್ಕರ್ ರಾಷ್ಟ್ರೀಯವಾದವು ಚಾಲ್ತಿಯಲ್ಲಿದೆ ಎಂದರ್ಥ.

 ಅಷ್ಟಕ್ಕೂ ದೇಶದ್ರೋಹ ಕಾಯಿದೆಯ ಹಿನ್ನೆಲೆ ಏನು ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಅದನ್ನು ರಾಜಕಾರಣಿಯೊಬ್ಬನ ಅಥವಾ ಅವರ ಅಣತಿಯಂತೆ ಕಾರ್ಯಾಚರಿಸುತ್ತಿರುವ ಪೊಲೀಸ್ ಇಲಾಖೆಯ ವ್ಯಾಖ್ಯಾನಕ್ಕೆ ಬಿಟ್ಟುಬಿಡುವಂಥದ್ದಲ್ಲ. ವಾಸ್ತವದಲ್ಲಿ ಇದು ಬ್ರಿಟಿಷರ ಕಾಲದಲ್ಲಿದ್ದ ರಾಜದ್ರೋಹ ಕಾಯಿದೆಯ ಪಡಿಯಚ್ಚು. ಅದನ್ನು ಭಾರತದಲ್ಲಿ ಸ್ವಾತಂತ್ರ್ಯ (ಆಝಾದಿ) ಹೋರಾಟಗಾರರನ್ನು ದಮನಿಸಲು, ಕ್ರೂರವಾಗಿ ಹಿಂಸಿಸಲು ಬ್ರಿಟಿಷರು ಪ್ರಯೋಗಿಸುತ್ತಿದ್ದರು. ವಿಚಿತ್ರವೆಂದರೆ ಈ ಕಾಯಿದೆಯ ಜನಕರಾಗಿರುವ ಬ್ರಿಟನ್‌ ನಲ್ಲೇ ಈ ಕಾಯಿದೆ ಚಾಲ್ತಿಯಲ್ಲಿಲ್ಲ. ರಾಜಸತ್ತೆ ಅಥವಾ ಬ್ರಿಟನ್ ರಾಣಿ ಇನ್ನೂ ಆಳ್ವಿಕೆ ನಡೆಸುತ್ತಿರುವ ಯುನೈಟೆಡ್ ಕಿಂಗ್‌ ಡಮ್ ನಲ್ಲಿಯೇ ಈ ಕರಾಳ ಕಾಯಿದೆಯನ್ನು ಕಿತ್ತುಹಾಕಿ ಅದೆಷ್ಟೋ ವರ್ಷಗಳಾಗಿವೆ. ಈಗ ಈ ಕಾನೂನು ಭಾರತದಲ್ಲಿ ಪ್ರಭುತ್ವದ ದೌರ್ಜನ್ಯದ ಅಸ್ತ್ರವಾಗಿ ಬೇಕಾಬಿಟ್ಟಿ ಪ್ರಯೋಗಿಸಲ್ಪಡುತ್ತಿದೆ.

- Advertisement -

ಭಾರತೀಯ ದಂಡಸಂಹಿತೆ (ಐಪಿಸಿ) 124ನೆ ಸೆಕ್ಷನ್ ಪ್ರಕಾರ ಸರಕಾರದ ಬಗ್ಗೆ ದ್ವೇಷ ಅಥವಾ ಅಸಹನೆ ಅಥವಾ ಸರಕಾರದ ವಿರುದ್ಧ ಅಸಮಾಧಾನ ಸೃಷ್ಟಿಸುವುದು ಅಥವಾ ಸೃಷ್ಟಿಸಲು ಯತ್ನಿಸುವುದು ದೇಶದ್ರೋಹ ಎಂದು ವಿವರಿಸಲಾಗಿದೆ. ದೇಶದ್ರೋಹವು ವಿಚಾರಣಾಯೋಗ್ಯ ಮತ್ತು ಜಾಮೀನುರಹಿತ ಅಪರಾಧವಾಗಿದ್ದು, ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಅರ್ಥೈಸುವುದಾದರೆ ಮೋದಿ ಪರಿವಾರ ಅಧಿಕಾರಕ್ಕೇರಿದ ನಂತರ ಯಥೇಚ್ಛವಾಗಿ ದೇಶದ್ರೋಹ ಪ್ರಕರಣ ದಾಖಲಾಗಿದೆ. ಇದರರ್ಥ ದೇಶದ್ರೋಹಿಗಳು ಹೆಚ್ಚಾದರು ಎಂದೋ? ಅಥವಾ ಹೆಚ್ಚಿನ ಜನರಿಗೆ ಸರಕಾರದ ಬಗ್ಗೆ ದ್ವೇಷ, ಅಸಹನೆ ಮೂಡಿದೆ ಎಂದೋ? ಜನರ ಅಭಿವ್ಯಕ್ತಿಗೆ ಸ್ಪಂದಿಸುವ ಕಿಂಚಿತ್ತೂ ಮನಸ್ಸಿಲ್ಲದ ಫ್ಯಾಶಿಸ್ಟ್ ಸರಕಾರವು ಬ್ರಹ್ಮಾಸ್ತ್ರವಾಗಿ ದೇಶದ್ರೋಹ ಪ್ರಕರಣವನ್ನು ದಾಖಲಿಸುತ್ತಿದೆ. ಕರಾಳ ಕೃಷಿ ಮಸೂದೆಯನ್ನು ವಿರೋಧಿಸಿದ ಕಾರಣಕ್ಕೆ ದೇಶದ ಬೆನ್ನೆಲುಬು ಎಂದು ಗೌರವಿಸಲ್ಪಡುವ ರೈತಾಪಿ ವರ್ಗ ಕೂಡ ಈಗ ದೇಶದ್ರೋಹಿಗಳಾಗಿ ಬಿಟ್ಟಿಲ್ಲವೇ?!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ ಸಿ ಆರ್‌ ಬಿ) ಪ್ರಕಾರ ಕಳೆದ ಒಂದು ದಶಕದಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. 2019ರಲ್ಲಿ ದಾಖಲಾದ ಪ್ರಕರಣಗಳ ಒಟ್ಟು ಸಂಖ್ಯೆ 93. 2016ರಲ್ಲಿ 35 ಪ್ರಕರಣಗಳು ದಾಖಲಾಗಿತ್ತು. ಅದರಲ್ಲೂ 2019ರಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದು ಕರ್ನಾಟಕದಲ್ಲಿ. 23 ವ್ಯಕ್ತಿಗಳ ವಿರುದ್ಧ 22 ಪ್ರಕರಣಗಳು ದಾಖಲಾಗಿದ್ದವು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಪೋಸ್ಟ್‌ ಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲ್ಪಟ್ಟಿರುವುದು. ಸ್ವಾರಸ್ಯಕರ ಸಂಗತಿ ಎಂದರೆ ಈ ರೀತಿ ಸಾಮಾಜಿಕ ಜಾಲತಾಣದ ಮೂಲಕ ಕರಾಳ ಕಾಯಿದೆಯನ್ನು ಹೆಗಲಿಗೇರಿಸಿಕೊಂಡವರಲ್ಲಿ ಬಹಳ ಮಂದಿ ಗ್ರಾಮೀಣ ನಿವಾಸಿಗಳು ಮತ್ತು ಇದೇ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಬಳಸುತ್ತಿರುವವರು.

ಇಂದು ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿದ, ಹಕ್ಕುಗಳಿಗಾಗಿ ಹೋರಾಡುವ, ನ್ಯಾಯಕ್ಕಾಗಿ ಪ್ರತಿಭಟನೆಗಿಳಿದ, ಪ್ರಭುತ್ವದ ದೌರ್ಜನ್ಯವನ್ನು ಪ್ರತಿರೋಧಿಸಿದ ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು, ವಿದ್ಯಾರ್ಥಿಗಳು, ರೈತರು, ಸಾಮಾಜಿಕ ಕಾರ್ಯಕರ್ತರು, ಮಹಿಳೆಯರು, ಸಂಘಟನೆಗಳ ನಾಯಕರು ದೇಶದ್ರೋಹ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಕರಾಳ ಕಾಯಿದೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಲಭವಾಗಿ ಸರ್ವಾಧಿಕಾರವನ್ನಾಗಿಸುವಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಭಾಗಶಃ ಯಶಸ್ವಿಯಾಗಿವೆ. ಬ್ರಿಟಿಷರ ಹಾದಿಯಲ್ಲಿ ಸಾಗುತ್ತಿರುವ ಫ್ಯಾಶಿಸ್ಟ್ ಸರಕಾರಕ್ಕೆ ಸ್ವತಂತ್ರ ಭಾರತದ ನಾಗರಿಕರು ದೇಶದ್ರೋಹಿಗಳಾಗಿ ಕಾಣುವುದರಲ್ಲಿ ಅಚ್ಚರಿ ಇಲ್ಲ.

Join Whatsapp