ಪೆಟ್ರೋಲ್ ಹಾಕಿಸಿಕೊಳ್ಳಲು ಪಿಯುಸಿ ಪ್ರಮಾಣಪತ್ರ ಕಡ್ಡಾಯ

Prasthutha|

ಹೊಸದಿಲ್ಲಿ: ದೆಹಲಿ ಸೇರಿದಂತೆ ಉತ್ತರ ಭಾರತವು ವಿಶೇಷವಾಗಿ ಚಳಿಗಾಲದಲ್ಲಿ ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಂಪ್‌ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ದೆಹಲಿ ಸರ್ಕಾರವು ಶೀಘ್ರದಲ್ಲೇ PUC (Pollution Under Control Certificate) ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ದೆಹಲಿಯಲ್ಲಿ ಮಾಲಿನ್ಯಕಾರಕ ವಾಹನಗಳು ಸಂಚರಿಸುವುದನ್ನು ತಡೆಯಲು ಮತ್ತು ಜನರು ಶುದ್ಧ ಗಾಳಿಯನ್ನು ಉಸಿರಾಡಲು ಈ ನಿಯಮವು ನಮಗೆ ಸಹಾಯ ಮಾಡುತ್ತದೆ. ಈ ಕರಡನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಇರಿಸಲಾಗಿದ್ದು, ಜಾರಿಗೊಳಿಸುವ ಮೊದಲು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ವಾಹನ ಮಾಲೀಕರು ತಮ್ಮ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಪೆಟ್ರೋಲ್ ಪಂಪ್‌ಗೆ ಹೋಗುವಾಗ ಕೊಂಡೊಯ್ಯಬೇಕಾಗಿದೆ. ದೆಹಲಿಯ ಕಳಪೆ ವಾಯು ಗುಣಮಟ್ಟವನ್ನು ಪರಿಗಣಿಸಿ ಈ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ರಸ್ತೆಗಳಲ್ಲಿ ಮಾಲಿನ್ಯಕಾರಕ ವಾಹನಗಳ ಮೇಲೆ ಕಣ್ಣಿಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.
ನೋಂದಾಯಿತ ಪಿಯುಸಿ ಕೇಂದ್ರಗಳ ಮೂಲಕ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ದೆಹಲಿಯಲ್ಲಿ 10 ವಲಯಗಳಲ್ಲಿ ಸುಮಾರು 966 ಇಂತಹ ಕೇಂದ್ರಗಳಿವೆ. ವಾಹನ ಮಾಲಿನ್ಯದ ಮೇಲ್ವಿಚಾರಣೆ ಮತ್ತು ಹೊರಸೂಸುವಿಕೆಯ ಮಾನದಂಡಗಳ ಪ್ರಕಾರ ವಾಹನಗಳ ಫಿಟ್‌ನೆಸ್ ಅನ್ನು ಪ್ರಮಾಣೀಕರಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಪಿಯುಸಿ ಕೇಂದ್ರಗಳಿಂದ ಸರಿಯಾದ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಲಿನ್ಯ ಮಟ್ಟದ ಪರೀಕ್ಷಾ ನಿರೀಕ್ಷಕರಿಂದ ಆವರ್ತಕ ತಪಾಸಣೆಗಳನ್ನು ಮಾಡಲಾಗುತ್ತದೆ.
ದೆಹಲಿ ಸರ್ಕಾರವು ಈ ಪರಿಣಾಮಕಾರಿ ನಿಯಮದ ಅನುಷ್ಠಾನಕ್ಕಾಗಿ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ವಾಹನ ಮಾಲೀಕರು ಮತ್ತು ಪೆಟ್ರೋಲ್ ಪಂಪ್ ಮಾಲೀಕರು ಪಿಯುಸಿ ಪ್ರಮಾಣಪತ್ರಗಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯವೂ ಬರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp