ಮಕ್ಕಳ ವ್ಯಾಕ್ಸಿನ್ ಹೆಸರಲ್ಲೂ ರಾಜಕೀಯ: ಸಚಿವರ ರಾಜೀನಾಮೆಗೆ WPI ಆಗ್ರಹ

Prasthutha|

ಬೆಂಗಳೂರು: ರಾಜ್ಯ ಸರಕಾರದ ಸಚಿವರು ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಾ ರಾಜ್ಯದ ಜನರ ಹಾದಿ ತಪ್ಪಿಸುತ್ತಿದ್ದಾರೆ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹಣೆಯೆಂದರೆ ರಾಜ್ಯದ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ ಹೇಳಿಕೆಯೇ ಸಾಕ್ಷಿಯಾಗಿದೆ. ಆದ್ದರಿಂದ ಮಕ್ಕಳ ವ್ಯಾಕ್ಸಿನ್ ಹೆಸರಲ್ಲೂ ರಾಜಕೀಯ ಮಾಡುವ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.

- Advertisement -


ರಾಜ್ಯದ ಕೆಲ ಜಿಲ್ಲೆಗಳಲ್ಲಿ 17 ವರ್ಷದೊಳಗಿನ ಮಕ್ಕಳಿಗೆ 1, 2ನೇ ಡೋಸ್ ಬಾಕಿ ಉಳಿದಿವೆ ಎಂದು ಪತ್ರಿಕಾ ಮಾಧ್ಯಮ ಅಂಕಿ ಅಂಶಗಳ ಸಮೇತ ವರದಿ ನೀಡಿದ್ದರೂ, ಗಾಢ ನಿದ್ರೆಯಲ್ಲಿ ಇರುವ ಸರಕಾರ ಮಾತ್ರ ಅಧಿಕಾರಿಗಳು ನೀಡುವ ಬೇಜವಾಬ್ದಾರಿಯ ಲೆಕ್ಕವನ್ನು ನೀಡುವ ಮೂಲಕ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.


ಕೋವಿಡ್ ಪ್ರಕರಣಗಳನ್ನು ತಹಬಂದಿಗೆ ತರಲು ಸಾಕಷ್ಟು ಪ್ರಯತ್ನಗಳು ನಡೆದಿರುವುದು ಸರಿಯಷ್ಟೇ. ಆದರೆ, ವಾಸ್ತವದಲ್ಲಿ ಕಾಟಾಚಾರದ ಸರ್ವೆಗಳು, ಲಸಿಕಾ ಅಭಿಯಾನ ನಡೆದಿರುವುದು ಮಾತ್ರ ದುರಂತವೇ ಸರಿ. ಇನ್ನು ಆರೋಗ್ಯ ಸಚಿವರು ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ, ವಾಸ್ತವಿಕತೆಯನ್ನು ಪರಿಶೀಲನೆ ಮಾಡದೇ ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ಪೂರ್ತಿಸಬೇಕು. ಇಲ್ಲವಾದಲ್ಲಿ ತಮ್ಮ ಕೆಲಸದಲ್ಲಿ ವಿಫಲ ಆಗಿದೆ ಎಂದು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

Join Whatsapp