SDPI ಬ್ಯಾನರ್ ಹರಿದ ಯುವಕರ ವಿರುದ್ಧ ಪ್ರಕರಣ ದಾಖಲು

Prasthutha|

ಸುಳ್ಯ: ಕಲ್ಲುಗುಂಡಿ ಪುಳಿಯತ್ತಡಿ ಬಳಿ ಹಾಕಲಾಗಿದ್ದ ಎಸ್ ಡಿಪಿಐನ ಜನಾಧಿಕಾರ ಸಮಾವೇಶದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವಕರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ಮೂಲದ 18 ಮಂದಿ ಯುವಕರು ಕುಶಾಲನಗರಕ್ಕೆ ಎಸ್ ಎಂಎಲ್ ಇಸ್ಯೂ ಟ್ರಾವೆಲ್ ವಾಹನದಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಅವರ ವಾಹನವು ಗೂನಡ್ಕ ಪುಳಿಯತ್ತಡಿ ಎಂಬಲ್ಲಿ ಚಾಲಕ ಉಪಾಹಾರ ಸೇವಿಸಲು ನಿಲ್ಲಿಸಿದ್ದನೆಂದೂ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ವಿಶ್ರಾಂತಿ ಪಡೆದಿದ್ದರೆನ್ನಲಾಗಿದೆ.

- Advertisement -


ಈ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಯುವಕರು ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಎಸ್ ಡಿಪಿಐ ಸಮಾವೇಶದ ಬ್ಯಾನರ್, ಕಾಂಗ್ರೆಸ್ ಪಕ್ಷದ ನಾಲ್ಕು ಬ್ಯಾನರ ಗಳನ್ನು ಹರಿದು ಹಾಕಿ ಅಲ್ಲಿಂದ ತೆರಳಿದ್ದರು. ಬ್ಯಾನರ್ ಹರಿಯುವುದನ್ನು ಎಸ್ ಡಿಪಿಐ ಸಮಿತಿಯ ಕಾರ್ಯದರ್ಶಿ ಶರೀಫ್ ಎಂಬವರು ನೋಡಿದ್ದರು. ಆದರೆ ಅವರು ಅದನ್ನು ಪ್ರಶ್ನಿಸದೆ ಯುವಕರು ಬಂದಿದ್ದ ವಾಹನದ ನಂಬರ್ ಕೆಎ. 20 ಡಿ 1455 ಅನ್ನು ಬರೆದುಕೊಂಡಿದ್ದರು. ಬಳಿಕ ಅದನ್ನು ಸುಳ್ಯ ಪೊಲೀಸರಿಗೆ ನೀಡಿ ಘಟನೆಯನ್ನು ವಿವರಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಪೊಲೀಸರಿಗೆ ಯುವಕರು ತೆರಳಿದ ವಾಹನದ ಚಾಲಕನ ಮೊಬೈಲ್ ನಂಬರ್ ದೊರಕಿತು.
ಚಾಲಕ ಪಾಣೆಮಂಗಳೂರಿನವನೆಂದು ತಿಳಿದುಬಂದಿದ್ದು, ಅವರನ್ನು ಸುಳ್ಯ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ಕುಶಾಲನಗರದಿಂದ ಸಂಜೆ ಪ್ರವಾಸ ಮುಗಿಸಿ ಮಂಗಳೂರಿಗೆ ಹೊರಟ ಯುವಕರ ತಂಡ ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ಬಂದರು. ಅಲ್ಲಿ ಯುವಕರು ತಪ್ಪೊಪ್ಪಿಕೊಂಡರೆಂದೂ, ಆದರೆ ಬ್ಯಾನರ್ ಅಳವಡಿಸಿದವರು ಯುವಕರ ಮೇಲೆ ಕೇಸು ದಾಖಲಿಸಬೇಕೆಂದು ಕೇಳಿಕೊಂಡ ಮೇರೆಗೆ ಕಲ್ಲುಗುಂಡಿ ಹೊರಠಾಣೆ ಪೊಲೀಸರು ಅವರನ್ನು ಸುಳ್ಯ ಪೊಲೀಸ್ ಠಾಣೆಗೆ ಕಳುಹಿಸಿದರು. ಸುಳ್ಯ ಠಾಣೆಯಲ್ಲಿ ರಾತ್ರಿ ಯುವಕರ ವಿಚಾರಣೆ ನಡೆಸಿದ ಪೊಲೀಸರು ಅವರ ಮೇಲೆ ಪೆಟ್ಟಿ ಕೇಸು ದಾಖಲಿಸಿ, ಮುಚ್ಚಳಿಕೆ ಬರೆಯಿಸಿ ಕಳುಹಿಸಿಕೊಟ್ಟರೆಂದು ತಿಳಿದುಬಂದಿದೆ.

Join Whatsapp