ಸ್ವಾಭಿಮಾನಿ ನಡಿಗೆಗೆ ಬೆಂಬಲ ಸೂಚಿಸಿದ ಸಚಿವರು
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಟ್ಯಾಬ್ಲೋ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಕಮ್ಯೂನಿಷ್ಟ್ ಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದು ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಂಗಳೂರಿನಲ್ಲಿ ಇಂದು ನಡೆಯುತ್ತಿರುವ ನಾರಾಯಣ ಗುರು ಟ್ಯಾಬ್ಲೋ ಮತ್ತು ಸ್ವಾಭಿಮಾನ ನಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳಿಗೆ ಗೌರವ ಕೊಡುವ ಕಾರ್ಯಕ್ರಮ ಸ್ವಾಗತಿಸುತ್ತೇನೆ. ಆದರೆ ನಾರಾಯಣ ಗುರುವಿನ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಒಳ್ಳೆಯ ವಿಚಾರವಲ್ಲ ಎಂದರು.
ಈ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸಬಾರದು. ನಾರಾಯಣ ಗುರುಗಳು ಒಂದು ಜಾತಿ, ವ್ಯವಸ್ಥೆಗೆ ಸೀಮಿತರಲ್ಲ. ಈ ಹಿಂದೆ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರುಗಳ ನಾಮಕರಣಕ್ಕೆ ಕಾಂಗ್ರೆಸ್ ನ ನಗರ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಉರಿದಿರುವ ಬೆಂಕಿಯ ಶಾಖಾದಲ್ಲಿ ಕಾಂಗ್ರೆಸ್ ನವರು ಇಲ್ಲಿ ಬೇಳೆ ಬೇಯಿಸುತ್ತಿದ್ದಾರೆ ಎಂದು ಟೀಕಿಸಿದರು.
ಜನಾರ್ದನ ಪೂಜಾರಿ ಅವರು ನಡೆಸುತ್ತಿರುವ ಟ್ಯಾಬ್ಲೋ ಯಾರ ವಿರುದ್ಧವೂ ಅಲ್ಲ ಎಂದು ತಿಳಿಸಿದ್ದಾರೆ. ಆ ಕಾರಣಕ್ಕಾಗಿ ನಾವು ಬೆಂಬಲ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ನೀಡಿರುವುದರ ಕುರಿತು ಸುದ್ದಿಗಾರರ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಈ ಜವಾಬ್ದಾರಿಯನ್ನು ಸಂತಸದಿಂದ ಒಪ್ಪಿಕೊಳ್ಳುತ್ತೇನೆ. ಶಾಸಕರ, ಅಧಿಕಾರಿಗಳ ನೆರವಿನೊಂದಿಗೆ ಕಾರ್ಯ ನಿರ್ವಹಿಸುತ್ತೇನೆ. ಜಿಲ್ಲೆಗೆ ಆಗಬೇಕಾದ ಕೆಲಸ ಕಾರ್ಯವನ್ನು ಒಂದೂವರೆ ವರ್ಷದಲ್ಲಿ ಆದ್ಯತೆ ಮೇರೆಗೆ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಜೊತೆಗೆ ಬಿಜೆಪಿ ಶಾಸಕರ ಸಂಪರ್ಕದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಯಾವ ಪಕ್ಷಕ್ಕೆ ಅಭದ್ರತೆ ಇದೆಯೋ ಅವರು ಹೊರಗಿನವರನ್ನು ಕರೆಸಿಕೊಳ್ಳಲು ಮುಂದಾಗಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಸದ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಪೂರ್ಣ ಬಹುಮತದ ಸರಕಾರ ರಚನೆ ಆಗಲಿದೆ ಎಂದು ಅವರು ಮಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.