ಪೂರ್ವ ಬಾಲ್ಯವಸ್ಥೆ ಶಿಕ್ಷಣ ಮತ್ತು ಆರೈಕೆ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ: ಬಿ.ಸಿ. ನಾಗೇಶ್

Prasthutha|

ಮಡಿಕೇರಿ: ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ‘ಕಲ್ಯಾಣ ಕರ್ನಾಟಕ’ ಭಾಗಕ್ಕೆ ಭಾರತ ಸಂವಿಧಾನದ ಅನುಚ್ಛೇದ 371 ಜೆ ಅನುಸಾರ 5 ಸಾವಿರ ಶಿಕ್ಷಕರು ಸೇರಿದಂತೆ ಒಟ್ಟು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಶಿಕ್ಷಣ ಸಚಿವ ಮತ್ತು ಕೊಡಗು ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

- Advertisement -


ಮಡಿಕೇರಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರದ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ನಾಗೇಶ್, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ತರುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ಅಂದರೆ ‘ಪೂರ್ವ ಬಾಲ್ಯವಸ್ಥೆ ಶಿಕ್ಷಣ ಮತ್ತು ಆರೈಕೆ’ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ.ಯು ಮುಖ್ಯ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಮಕ್ಕಳು ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಹೇಳಿದ ಸಚಿವರು, ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಹೊಸದಾಗಿ ಶಿಷ್ಯವೇತನ ನೀಡಲು ಒಂದು ಸಾವಿರ ಕೋಟಿ ರೂಪಾಯಿ ಹಣ ಮೀಸಲಿಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.

- Advertisement -


ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದಜೆಗೆ ಏರಿಸಲಾಗಿದೆ. ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರತಿರೋಧ ಲಸಿಕೆ ನೀಡಿರುವುದು ವಿಶೇಷವಾಗಿದೆ. ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಅಗತ್ಯ ಕ್ರಮವಹಿಸಲಾಗಿದ್ದು, ಇದುವರೆಗೆ 15 ವರ್ಷ ಮೇಲ್ಪಟ್ಟ 4,23,115 ಮಂದಿಯಲ್ಲಿ 4,27,225 ಮಂದಿಗೆ ಪ್ರಥಮ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಿ ಶೇ. 100 ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಹಾಗೆಯೇ 3,82,883 ಮಂದಿ ಎರಡನೇ ಡೋಸ್ ಪಡೆದು ಶೇ.90 ಕ್ಕಿಂತ ಹೆಚ್ಚು ಮಂದಿ ಜನವರಿ, 13 ರವರೆಗೆ ಎರಡನೇ ಡೋಸ್ ಪಡೆದಿದ್ದಾರೆ. ಪ್ರತೀ ತಾಲ್ಲೂಕಿನಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ 680 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 50 ವೆಂಟಿಲೇಟರ್, 50 ಐಸಿಯು ಜಿಲ್ಲಾಸ್ಪತ್ರೆಯಲ್ಲಿದೆ ಎಂದೂ ಸಚಿವ ನಾಗೇಶ್ ತಿಳಿಸಿದರು.



Join Whatsapp