ಕುಖ್ಯಾತ ರೌಡಿ ರಾಹುಲ್ ನನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು

Prasthutha|

ಬೆಂಗಳೂರು:  ಗಾಂಜಾ ಸಾಗಾಟ ಸೇರಿದಂತೆ 19 ಪ್ರಕರಣಗಳಲ್ಲಿ ಭಾಗಿಯಾಗಿ 8 ಕೃತ್ಯಗಳಲ್ಲಿ ವಾರೆಂಟ್ ಜಾರಿಯಾಗಿದ್ದ ಕುಖ್ಯಾತ ರೌಡಿ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಗೆ ಇಂದು ಮುಂಜಾನೆ ಹನುಮಂತನಗರ ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.

- Advertisement -

ಪೊಲೀಸರ ಗುಂಡೇಟು ಕಾಲಿಗೆ ತಗುಲಿರುವ ರೌಡಿ ರಾಹುಲ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಗಾಂಜಾ ದಂಧೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ  ರಾಹುಲ್ ಇಂದು ಬೆಳಗ್ಗಿನ ಜಾವ 4.30 ರ ಸುಮಾರಿಗೆ ಕೋಣನಕುಂಟೆಯ ನಾರಾಯಣ ನಗರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹನುಮಂತನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ( ಪಿಎಸ್ ಐ) ಬಸವರಾಜ ಪಾಟೀಲ್ ಸಿಬ್ಬಂದಿಯ ಜೊತೆ  ಬಂಧನಕ್ಕೆ ತೆರಳಿದ್ದಾರೆ.

- Advertisement -

ಪೊಲೀಸರ ವಾಹನವನ್ನು ಕಂಡ ಕೂಡಲೇ ರೌಡಿ ರಾಹುಲ್ ಡ್ರ್ಯಾಗರ್ ನಿಂದ ಪಿಎಸ್ ಐ ಬಸವರಾಜ ಪಾಟೀಲ್ ಹಾಗೂ ಸಿಬ್ಬಂದಿ  ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ.

ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಬಸವರಾಜ ಪಾಟೀಲ್ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದು ಅದು ರಾಹುಲ್ ಕಾಲಿಗೆ ತಗುಲಿ ಸ್ಥಳದಲ್ಲಿ ಕುಸಿದು ಬಿದ್ದಿದ್ದು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೌಡಿ ಕುಳ್ಳು ರಿಜ್ವಾನ್ ಸಹಚರನಾಗಿದ್ದ ಸ್ಟಾರ್ ರಾಹುಲ್ ನಾಲ್ಕು ಕೊಲೆಯತ್ನ, ಬೆದರಿಕೆ, ಗಾಂಜಾ ಸರಬರಾಜು ಮಾರಾಟ ಸೇರಿ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ದಕ್ಷಿಣ ವಿಭಾಗದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು 8 ಕೃತ್ಯ ಗಳಲ್ಲಿ  ಈತನ ವಿರುದ್ಧ ವಾರೆಂಟ್  ಜಾರಿಯಾಗಿತ್ತು.

ಇತ್ತೀಚೆಗೆ ಪತ್ತೆಯಾದ 200 ಕೆಜಿ ಗಾಂಜಾ ಕೇಸ್ ನಲ್ಲಿ ಸಹ ಇತನ ಹೆಸರು ಕೇಳಿ ಬಂದಿತ್ತು. 

ಬೇಕರಿ ರಘು ಹತ್ಯೆ ಮಾಡಿದ ಬಳಿಕ ಪೊಲಿಸರಿಗೆ ಶರಣಾಗುವೆ ಎಂದು ತನ್ನ ಹುಟ್ಟುಹಬ್ಬದ  ದಿನ ಇಸ್ಟಾಗ್ರಾಂ ನಲ್ಲಿ ವಿಡಿಯೋ ಮಾಡಿ ಪೊಲೀಸರಿಗೆ ಬಹಿರಂಗ ಸವಾಲು ಹಾಕಿದ್ದ. ಸೈಕಲ್ ರವಿ ಮತ್ತು ಬೇಕರಿ ರಘು ಇಬ್ಬರ ಎದುರಾಳಿ ಗ್ಯಾಂಗ್ ನಲ್ಲಿ ರಾಹುಲ್ ಇದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

Join Whatsapp