ಕೊಚ್ಚಿ: ದೇಶದ್ರೋಹ ಪ್ರಕರಣದಲ್ಲಿ ಇಂದು ನಟಿ ಆಯಿಷಾ ಸುಲ್ತಾನಾ ಅವರನ್ನು ಕೊಚ್ಚಿಯ ಕಾಕನಾಡಿನ ಫ್ಲ್ಯಾಟ್‌ವೊಂದರಲ್ಲಿ ಲಕ್ಷದ್ವೀಪದ ಕವರತ್ತಿ ಪೊಲೀಸರು ವಿಚಾರಣೆ ನಡೆಸಿದ್ದು, ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಆಯಿಷಾ ಸಹೋದರನ ಲ್ಯಾಪ್‌ಟಾಪ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಯಿಷಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವುದು ಇದು ಮೂರನೇ ಬಾರಿ. ಯಾವುದೇ ಮುನ್ಸೂಚನೆಯಿಲ್ಲದೆ ಲಕ್ಷದ್ವೀಪದ ಕವರತ್ತಿ ಪೊಲೀಸರು ಕೊಚ್ಚಿಗೆ ಆಗಮಿಸಿ ವಿಚಾರಣೆ ನಡೆಸಿದ್ದು, ದೇಶದ್ರೋಹದ ಪ್ರಕರಣದಲ್ಲಿ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಪಡೆಯದೇ ಇದ್ದಿದ್ದರೆ ತನ್ನನ್ನು ಈಗಾಗಲೇ ಪೊಲೀಸರು ಬಂಧಿಸುತ್ತಿದ್ದರು ಎಂದು ಆಯಿಷಾ ಮಾಧ್ಯಮಗಳಿಗೆ ತಿಳಿಸಿದರು.