ಲಖನೌ : ಉತ್ತರ ಪ್ರದೇಶದ ಕಾಸ್ ಗಂಜ್ ಪೊಲೀಸ್ ಸಿಬ್ಬಂದಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಮದ್ಯ ಮಾಫಿಯಾ ನಡೆಸುತ್ತಿದ್ದ ಕಿಂಗ್ ಪಿನ್ ಮೋತಿಗೆ ವಾರೆಂಟ್ ಜಾರಿಗೊಳಿಸಲು ಪೊಲೀಸರು ನಾಗ್ಲಾ ಧೀಮರ್ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಒಬ್ಬ ಕಾನ್ಸ್ ಟೇಬಲ್ ನನ್ನು ಹತ್ಯೆ ಮಾಡಿ, ಸಬ್ ಇನ್ಸ್ ಪೆಕ್ಟರ್ ಗೆ ಗಂಭೀರ ಗಾಯಗೊಳಿಸಿದ್ದರು. ಇದಾದ ನಂತರ ಮೋತಿ ಮತ್ತು ಅವರ ಸಹೋದರ ಎಲ್ಕಾರ್ ಮತ್ತು ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಫೆ.9ರಂದು ಎಲ್ಕಾರ್ ಪೊಲೀಸ್ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ. ಮೋತಿಯನ್ನು ಬಂಧಿಸಲು ಆರು ತಂಡ ರಚಿಸಲಾಗಿತ್ತು. ಮೋತಿ ತನ್ನ ಸಹಾಯಕರೊಂದಿಗೆ ಕಾಳಿ ನದಿ ಬಳಿಯ ಕಾಡಿನಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 2:30ರ ಸುಮಾರಿಗೆ ಪೊಲೀಸ್ ತಂಡ ಪ್ರದೇಶವನ್ನು ಸುತ್ತುವರೆದಿತ್ತು.
ಈ ವೇಳೆ ದುಷ್ಕರ್ಮಿಗಳು ಪೊಲೀಸರತ್ತ ಗುಂಡು ಹಾರಿಸಿದ್ದರು. ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿ, ಪ್ರಮುಖ ಆರೋಪಿಯನ್ನು ಹತ್ಯೆ ಮಾಡಿದ್ದಾರೆ. ಆತನ ಸಹಚರರು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳಿಂದ ಪಿಸ್ತೂಲು, ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.