ಮುಸ್ಲಿಮ್ ಯುವಕನ ಮೇಲೆ ಪೊಲೀಸರ ಕ್ರೌರ್ಯ ಸತ್ಯ ಶೋಧನಾ ವರದಿಯಲ್ಲಿ ಬಹಿರಂಗ

Prasthutha|

ಬೆಂಗಳೂರು: ಪೊಲೀಸರ ಅಮಾನುಷ ಕ್ರೌರ್ಯದಿಂದ ಸಲ್ಮಾನ್ ಖಾನ್ ಎಂಬ ಯುವಕ ತನ್ನ ಕೈ ಕಳೆದುಕೊಂಡಿದ್ದು, ಇಡೀ ಪ್ರಕರಣದಲ್ಲಿ ಪೊಲೀಸರ ಅಮಾನುಷ ಕೃತ್ಯ ಸ್ಪಷ್ಟವಾಗಿ ಕಂಡುಬಂದಿರುವುದರಿಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೈಕೋರ್ಟ್ ಹಿರಿಯ ವಕೀಲ ಬಾಲನ್ ಒತ್ತಾಯಿಸಿದ್ದಾರೆ.

- Advertisement -


ಮಾನವ ಹಕ್ಕುಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ (ಎನ್ ಸಿ ಎಚ್ ಆರ್ ಒ), ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್, ದಿ ಕ್ಯಾಂಪೇನ್ ಎಗೈನ್ಸ್ಟ್ ಹೇಟ್ ಸ್ಪೀಚ್ ಸಂಘಟನೆಗಳು ವರ್ತೂರು ಸಲ್ಮಾನ್ ಖಾನ್ ಪ್ರಕರಣದ ಬಗ್ಗೆ ತಯಾರಿಸಿರುವ ಸತ್ಯಶೋಧನಾ ವರದಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.


ವರ್ತೂರು ಪೊಲೀಸರ ಕೃತ್ಯದಿಂದ ಸಲ್ಮಾನ್ ಖಾನ್ ಕೈ ಕಳೆದುಕೊಂಡಿದ್ದಾನೆ. ಇದು ಪೊಲೀಸರು ವ್ಯವಸ್ಥಿತವಾಗಿ ನಡೆಸಿದ ಅಪರಾಧವಾಗಿದ್ದು, ಸಲ್ಮಾನ್ ಖಾನ್ ಮುಸ್ಲಿಂ ಯುವಕನೆಂಬ ಕಾರಣಕ್ಕೆ ಈ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
20 ವರ್ಷ ಪ್ರಾಯದ ಸಲ್ಮಾನ್ ಖಾನ್ ನನ್ನು ನ.27ರಂದು ಠಾಣೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದರು.

- Advertisement -

ಆತನ ವಿರುದ್ಧ ಯಾವುದೇ ಎಫ್ ಐಆರ್ ದಾಖಲಾಗಿರಲಿಲ್ಲ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳು ಸಹ ಠಾಣೆಯಲ್ಲಿ ಸಿಕ್ಕಿಲ್ಲ. ಬ್ಯಾಟರಿ ಕಳ್ಳತನದ ಪ್ರಕರಣದಲ್ಲಿ ಸಲ್ಮಾನ್ ಖಾನ್ ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ, ಬಗೆಹರಿಯದ ಪ್ರಕರಣಕ್ಕೆ ಸಿಲುಕಿಸುವ ಸಲುವಾಗಿ, ವರ್ತೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಸೇರಿದಂತೆ ಠಾಣಾ ಸಿಬ್ಬಂದಿ ಆತನ ಕೈಯನ್ನು ಬೂಟುಕಾಲಿನಲ್ಲಿ ಒದ್ದು ಗಾಯಗೊಳಿಸಿದ್ದಾರೆ. ರಕ್ತಹೆಪ್ಪು ಗಟ್ಟಿ ಇಡೀ ಕೈಯನ್ನು ಕತ್ತರಿಸಲಾಗಿದೆ. ಇದು ಸತ್ಯಶೋಧನಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ಬಾಲನ್ ತಿಳಿಸಿದರು.
ಎನ್ ಸಿಎಚ್ ಆರ್ ಓನ ಕಾರ್ಯದರ್ಶಿ ಮಲ್ಲೇಶ್ ಮತ್ತು ವಕೀಲೆ ಮಾನ್ವಿ ಮತ್ತು ಇತರರು ಉಪಸ್ಥಿತರಿದ್ದರು.

Join Whatsapp