ತಿರುಪತಿ : ಪೊಲೀಸ್ ದೌರ್ಜನ್ಯದಿಂದ ಬೇಸತ್ತು ಮುಸ್ಲಿಮ್ ಸಮುದಾಯದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆಯ ಬಳಿಕ, ವೀಡಿಯೊವೊಂದು ವೈರಲ್ ಆಗಿದ್ದು, ಪೊಲೀಸರ ದೌರ್ಜನ್ಯದಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದೆ.
ಆಂಧ್ರ ಪ್ರದೇಶದ ನಂದ್ಯಾಲ್ ಪಟ್ಟಣದ ಶೇಖ್ ಅಬ್ದುಲ್ ಸಲಾಂ ಕುಟುಂಬದ ನಾಲ್ವರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಗೆ ಸಂಬಂಧವೇ ಇಲ್ಲದ ಪ್ರಕರಣಗಳಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಇನ್ನು ತಮಗೆ ಈ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಬ್ದುಲ್ ಸಲಾಂ ಕುಟುಂಬ ಸಾವಿಗೂ ಮುನ್ನ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೆಬಲ್ ನನ್ನು ಬಂಧಿಸಲಾಗಿದೆ. ಅಬ್ದುಲ್ ಸಲಾಂ ನಂದ್ಯಾಲ್ ನ ಆಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಕಳ್ಳತನದ ಆರೋಪದಲ್ಲಿ ಸಲಾಂ ಅನ್ನು ಜೈಲಿಗೆ ಕಳುಹಿಸಲಾಗಿತ್ತು.
ಜಾಮೀನಿನ ಮೇಲೆ ಸಲಾಂ ಬಿಡುಗಡೆಗೊಂಡಿದ್ದರು. ಆಗಲೂ ಪೊಲೀಸರು ಅವರನ್ನು ಬೆಂಬಿಡದೆ ಕಾಡಲಾರಂಭಿಸಿದ್ದರು. ಆ ನಂತರ ಸಲಾಂ ಆಟೊ ಓಡಿಸಲಾರಂಭಿಸಿದ್ದರು. ಆದರೆ, ಆಗಲೂ ಪೊಲೀಸರು ಆತನಿಗೆ ಕಿರುಕುಳ ನೀಡಲಾರಂಭಿಸಿದ್ದರು. ಆಭರಣ ಮಳಿಗೆಯ ಮಾಲಕನ ಪರವಹಿಸಿದ್ದ ಪೊಲೀಸರು ನೀಡಿದ ಕಿರುಕುಳಕ್ಕೆ ಬೇಸತ್ತು ಕುಟುಂಬವೇ ಬಲಿಯಾಗಿದೆ.