ಜನಾಗ್ರಹ ಆಂದೋಲನದಿಂದ ಮುಖ್ಯಮಂತ್ರಿ ಮನೆಗೆ ನಡಿಗೆ: ಮುಖಂಡರು ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು : ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಬಡ ಜನರಿಗೆ ಸಮಗ್ರ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜನಾಗ್ರಹ ಆಂದೋಲನ ವತಿಯಿಂದ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ಮುಖ್ಯಮಂತ್ರಿಯವರ ಮನೆಗೆ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಗರದ ಮೌರ್ಯ ವೃತ್ತದಿಂದ ಮುಖ್ಯಮಂತ್ರಿ ಮನೆಗೆ ನಡಿಗೆಯಲ್ಲಿ ಹೊರಟಿದ್ದ ಮುಖಂಡರನ್ನು ಹೈಗ್ರೌಂಡ್ಸ್ ಪೊಲೀಸರು ಮಾರ್ಗ ಮಧ್ಯೆ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

- Advertisement -

ಮುಖಂಡರಾದ ಮಾವಳ್ಳಿ ಶಂಕರ್, ಕೋಡಿಹಳ್ಳಿ ಚಂದ್ರಶೇಖರ್, ಅಫ್ಸರ್ ಕೊಡ್ಲಿ ಪೇಟೆ, ಹಿರಿಯ ವಕೀಲ ಬಾಲನ್ ಎಸ್, ಮುಖಂಡರಾದ ಯೂಸೂಫ್ ಕನ್ನಿ, ವಿ. ನಾಗರಾಜ್, ಹಬೀಬುಲ್ಲಾ, ಕುಮಾರ್ ಸಮತಳ, ಗೌರಿ, ವರದರಾಜೇಂದ್ರ ಸೇರಿದಂತೆ ಒಟ್ಟು 40 ಮಂದಿಯನ್ನು ಬಂಧಿಸಿ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.

ಈ ವೇಳೆ ಮಾತನಾಡಿದ ದಸಂಸ ಮುಖಂಡ ಮಾವಳ್ಳಿ ಶಂಕರ್, ರಾಜ್ಯದಲ್ಲಿ ಕೋವಿಡ್ ನಿಂದ 3 ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಕೋವಿಡ್ ವಾರಿಯರ್ಸ್ ಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಕನಿಕರವಿಲ್ಲ. ಸರ್ಕಾರದ ಪ್ರತಿನಿಧಿಗಳು ಕುರ್ಚಿ ಗಲಾಟೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು. ತಮಿಳುನಾಡು, ಕೇರಳ ಸರ್ಕಾರಗಳು ಉತ್ತಮ ಪ್ಯಾಕೇಜ್ ಗಳನ್ನು ಘೋಷಿಸಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಬಡವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಟೀಕಿಸಿದರು.

- Advertisement -

ಎಸ್ ಡಿಪಿಐನ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಜನಾಗ್ರಹ ಆಂದೋಲನದ ವತಿಯಿಂದ ಇಂದು ಮುಖ್ಯಮಂತ್ರಿಯ ಮನೆಗೆ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಪೊಲೀಸರು ಬಂಧಿಸಿದ್ದಾರೆ.  ಲಾಕ್ ಡೌನ್ ನಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಸಮಗ್ರ ಪ್ಯಾಕೇಜ್ ಘೋಷಿಸಬೇಕು. ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಪ್ರತಿ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂ.ಪರಿಹಾರ ನೀಡಬೇಕು. ರಾಜ್ಯದಲ್ಲಿ ಮುಂಗಾರು ಪ್ರಾರಂಭಗೊಂಡಿದ್ದು, ರೈತರಿಗೆ ಉಚಿತ ಬಿತ್ತನೆ ಭೀಜ ವಿತರಿಸಬೇಕು. ಕೇರಳ ಮಾದರಿಯಲ್ಲಿ ಸಮಗ್ರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.



Join Whatsapp