ಮಂಗಳೂರು: ಸ್ಥಳೀಯ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ನೆಪದಲ್ಲಿ ನಿನ್ನೆ ರಾತ್ರಿ ಹಲವಾರು ಮನೆಗಳಿಗೆ ದಾಳಿ ನಡೆಸಿ ಕೆಲವು ಮಂದಿ ಅಮಾಯಕ ಯುವಕರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧ ಪಟ್ಟಂತೆ ಪೊಲೀಸರು ಸೂಕ್ತ ರೀತಿಯ ತನಿಖೆ ನಡೆಸಿ ನೈಜ ಅರೋಪಿಗಳನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲಿ ಅದು ಬಿಟ್ಟು ಬಿಜೆಪಿ ನಾಯಕರನ್ನು ತೃಪ್ತಿಪಡಿಸಲು ಅಮಾಯಕ ಮುಸ್ಲಿಂ ಯುವಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಪೊಲೀಸ್ ಇಲಾಖೆಗೆ ಶೋಭೆ ತರುವ ಕೆಲಸವಲ್ಲ. ಇದನ್ನು SDPI ಖಂಡಿಸುತ್ತಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ತಿಳಿಸಿದ್ದಾರೆ
ಪ್ರವೀಣ್ ಹತ್ಯೆಯ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಪುತ್ತೂರು, ಸುಳ್ಯದಲ್ಲಿ ಬಂದ್ ಆಚರಿಸಲು ಕರೆ ಕೊಟ್ಟಿದೆ. ಅದಲ್ಲದೆ ಪುತ್ತೂರಿನಿಂದ ಬೆಳ್ಳಾರೆವರೆಗೆ ಶವಯಾತ್ರೆ ನಡೆಸಲು ಸಂಘಪರಿವಾರ ಸಿದ್ಧತೆ ನಡೆಸುತ್ತಿದೆ . ಇದಕ್ಕೆ ಪೊಲೀಸರು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಶವಯಾತ್ರೆ ಹೆಸರಿನಲ್ಲಿ ಸಂಘಪರಿವಾರ ಈ ಹಿಂದೆಯೂ ಬಹಳಷ್ಟು ದಾಂಧಲೆ, ಗಲಭೆ, ದೊಂಬಿ , ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಗಳನ್ನು ನಾಶಪಡಿಸಿದ ಇತಿಹಾಸವಿದೆ. ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ಶವಯಾತ್ರೆ ನಡೆಸಲು ಅನುಮತಿ ನೀಡಬಾರದು. ಒಂದು ವೇಳೆ ಶವಯಾತ್ರೆ, ಮೆರವಣಿಗೆ ನಡೆಸಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಶಾಕಿರ್ ಎಚ್ಚರಿಸಿದ್ದಾರೆ.