ಬೆಂಗಳೂರು : ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ನಿರ್ವಹಣೆಯ ಕುರಿತು ಮಾಹಿತಿ ಪಡೆಯಲು ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ 10 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ಇದೀಗ ಆರಂಭಿಸಿದ್ದಾರೆ.
11 ಗಂಟೆಗೆ ಆರಂಭವಾದ ಸಭೆಯಲ್ಲಿ 10 ರಾಜ್ಯಗಳಲ್ಲಿ ಕೋವಿಡ್ ಬಿಕ್ಕಟ್ಟು ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಭಾಷಣಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತು ಆರಂಭಿಸಿದ್ದಾರೆ. ಸಭೆಯಲ್ಲಿ ಕರ್ನಾಟಕ, ಬಿಹಾರ, ಅಸ್ಸಾಂ, ಚಂಡೀಗಡ, ತಮಿಳುನಾಡು, ಉತ್ತರಾಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ ಹಾಗೂ ದೆಹಲಿ ರಾಜ್ಯಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ವೇಳೆ ಗ್ರಾಮೀಣ ಮಟ್ಟದಲ್ಲಿ ಕೊರೊನಾ ನಿರ್ವಹಣೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಮಾಹಿತಿ ಪಡೆಯಲಿದ್ದಾರೆ.
ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಈಗಾಗಲೇ ಆರಂಭಗೊಂಡಿದೆ.