108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆ, ಟರ್ಮಿನಲ್ -2 ಅನಾವರಣಗೊಳಿಸಿದ ಪ್ರಧಾನಿ ಮೋದಿ

Prasthutha|

ಬೆಂಗಳೂರು: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದರು.

- Advertisement -

 ಬಳಿಕ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಈ ವಿಶೇಷ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಸೌಭಾಗ್ಯ, ಇಂದು ಎರಡು ವಿಶೇಷ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದರು. 

ಕೆಂಪೇಗೌಡರ ಪ್ರತಿಮೆ ಮತ್ತು ಜಲಾಭಿಷೇಕಕ್ಕೆ ನನಗೆ ಅವಕಾಶ ಸಿಕ್ಕಿದ್ದು ಪುಣ್ಯ. ಕರ್ನಾಟಕಕ್ಕೆ ವಂದೇ ಭಾರತ್ ರೈಲು ಸಿಕ್ಕಿದೆ. ಅದು ಸ್ವದೇಶಿ ನಿರ್ಮಿತ ರೈಲು ಆಗಿದೆ. ಕರ್ನಾಟಕಕ್ಕೆ ಮೇಡ್ ಇನ್ ಇಂಡಿಯಾ ರೈಲು ಸಿಕ್ಕಿದೆ. ಇದು ಸ್ಟಾರ್ಟ್ ಅಪ್ ನ್ನು ಪ್ರತಿನಿಧಿಸುತ್ತದೆ. ಇನ್ನು ಭಾರತ್ ಗೌರವ್ ದರ್ಶನ ರೈಲು ಈ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತದೆ ಎಂದರು.

- Advertisement -

ವಿದೇಶಿ ನೇರ  ಬಂಡವಾಳ ಹೂಡಿಕೆಯಲ್ಲಿ ದೇಶದ ಶೇ.25 ರಷ್ಟು ಪಾಲು ಹೊಂದಿರುವ ಕರ್ನಾಟಕ ಹಾಗೂ ಬೆಂಗಳೂರು ಅಭಿವೃದ್ಧಿಯ ಮುಂಚೂಣಿ ಪಥದಲ್ಲಿವೆ. ನಾಡಪ್ರಭು ಕೆಂಪೇಗೌಡರ ಕಲ್ಪನೆಯ ಬೆಂಗಳೂರಿನ ಸಮಗ್ರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಾಣಿಜ್ಯ, ಸಂಸ್ಕೃತಿ, ಪರಂಪರೆ,ಆಡಳಿತದ ಸಮರ್ಪಕ ಸಂಯೋಜನೆಯಿಂದ ಕೆಂಪೇಗೌಡರು ನಗರ ನಿರ್ಮಾಣಕ್ಕೆ ಬುನಾದಿ ಹಾಕಿದರು. ಇಂದು ಆಡಳಿತ,ವ್ಯಾಪಾರದ ರೂಪುರೇಷೆ ಬದಲಾದರೂ ಕೂಡ ಬೆಂಗಳೂರಿನ ಆರ್ಥಿಕತೆ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಸಾಗಿದೆ. ಭಾರತದ ಮೊದಲ ಮೇಕ್  ಇನ್ ಇಂಡಿಯಾ  ವಂದೇ ಭಾರತ ರೈಲು  ಕರ್ನಾಟಕದಿಂದ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಸಾಮಾಜಿಕ ಜಾಲತಾಣಗಳು ಹಾಗೂ ಭಾವಚಿತ್ರಗಳಲ್ಲಿರುವುದಕ್ಕಿಂತಲೂ ಸುಂದರವಾಗಿದೆ. ಈ ನಾಡಿನ ಜನರ ಹಳೆಯ ಬೇಡಿಕೆ ಈಗ ಈಡೇರಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಮಾಡಿ,ಅವರ ಪಾದಗಳಿಗೆ ಜಲಾಭಿಷೇಕ ಮಾಡುವ ಅವಕಾಶ ದೊರೆತಿರುವುದು ತಮ್ಮ ಪಾಲಿನಸೌಭಾಗ್ಯವಾಗಿದೆ ಎಂದರು.

ಸ್ಟಾರ್ಟ್ ಅಪ್‌ಗಳ ಸ್ಫೂರ್ತಿಯ ಚಿಲುಮೆ

ಭಾರತವನ್ನು ಸಶಕ್ತಗೊಳಿಸಲು ಸ್ಟಾರ್ಟ್ ಅಪ್‌ ಗಳು ರಹದಾರಿಯಾಗಿವೆ. ಬೆಂಗಳೂರು ಸ್ಟಾರ್ಟ್ ಅಪ್ ಯೋಜನೆಗಳ ಸ್ಫೂರ್ತಿಯ ಚಿಲುಮೆಯಾಗಿವೆ.ಯುವಶಕ್ತಿ,ಯುವಭಾರತದ ಪ್ರತಿಬಿಂಬ ಬೆಂಗಳೂರು .ವಂದೇ ಭಾರತ ಕೇವಲ ರೈಲು ಮಾತ್ರವಲ್ಲ ಅದು ನವಭಾರತದ ನಿರ್ಮಾಣದ ಪ್ರತೀಕ .ಈ ಹಿಂದೆ ಭಾರತದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು ಈಗ ಅವುಗಳು ಶಕ್ತಿಯಿಂದ ಓಡುತ್ತಿವೆ.400 ಕ್ಕೂ ಹೆಚ್ಚು ಹೊಸ ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೆಗೆ ಹೊಸ ಆಯಾಮ ನೀಡಿವೆ‌.ಸರಕು, ಸಾಗಣೆಗೆ ಅರ್ಪಿತವಾದ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ. ಹೊಸ ಹೊಸ ವಲಯಗಳನ್ನು ರೈಲು ಸಂಪರ್ಕಿಸುತ್ತಿದೆ. ಬೆಂಗಳೂರಿನಲ್ಲಿ ದೇಶದ ಮೊದಲ ಹವಾನಿಯಂತ್ರಿತ ಸರ್.ಎಂ.ವಿಶ್ವೇಶರಯ್ಯ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ.ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಸಮಗ್ರ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು.

ವೈಮಾನಿಕ ಸಂಪರ್ಕಜಾಲವು ವಿಸ್ತಾರವಾಗುತ್ತಿದೆ. ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತವು ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.2014 ರ ಪೂರ್ವದಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು ಈಗ ಅವು ದುಪ್ಪಟ್ಟಾಗಿದ್ದು  140 ಕ್ಕೆ ಏರಿವೆ .ಪ್ರಧಾನ ಮಂತ್ರಿ ಗತಿ ಶಕ್ತಿ, ಪಿಎಂ ಸ್ವನಿಧಿ,ಪಿಎಂ ಕಿಸಾನ್ ಸಮ್ಮಾನ್ ,ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ದೇಶ ಹಾಗೂ ರಾಜ್ಯದ ಪ್ರಗತಿಯನ್ನು ನಾಡಿನ ಜನರ ಮುಂದೆ ವಿವರಿಸಿದರು.

ಉದ್ದೇಶಿತ ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯು ಸಾರಿಗೆ ವೆಚ್ಚ ಕಡಿಮೆಗೊಳಿಸಿ,ಹೊಸತನ,ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ.ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಮೂಲಸೌಕರ್ಯಗಳ ವಿಕಸನಕ್ಕೂ ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಆದ್ಯತೆ ನೀಡಿದೆ‌.

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೆಂಪೇಗೌಡರ ಚಿಂತನೆ ಹಾಗೂ ವಿಚಾರಧಾರೆಗಳ ಹಾದಿಯಲ್ಲಿ ನಡೆದು  ಕರ್ನಾಟಕವನ್ನು  ಅಭಿವೃದ್ಧಿಗೊಳಿಸುವ ಸಂಕಲ್ಪವನ್ನು ಮಾಡಲಾಗಿದೆ ಎಂದು  ತಿಳಿಸಿದರು.

ಪ್ರಧಾನಮಂತ್ರಿಗಳು ರಾಜ್ಯಕ್ಕೆ ಎರಡು ಕೊಡುಗೆಗಳನ್ನು ಕೊಟ್ಟಿದ್ದಾರೆ. ವಂದೇಭಾರತ ರೈಲು ಮತ್ತು ವಿಮಾಣನಿಲ್ದಾಣದ 2ನೇ ಟರ್ಮಿನಲ್, ಸಬ್ ಅರ್ಬನ್ ರೈಲು.  ಕರಾವಳಿಯಲ್ಲಿ ಬಂದರು ನಿರ್ಮಾಣ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿರುವ ಪ್ರಧಾನಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೆಂಪೇಗೌಡರ ವಿಚಾರಧಾರೆಯ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಲಾಗಿದೆ ಎಂದರು.

ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವ ದಿನ :

ಇಂದು ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವ ದಿನವಾಗಿದೆ.  ನಾಡಿಗೆ ಶ್ರೇಷ್ಟ ಸಂತರಾದ ಕನಕದಾಸರ ಜಯಂತಿ , ಮಹರ್ಷಿ ವಾಲ್ಮೀಕಿಯವರಿಗೆ ಹಾಗೂ  ನಾಡಿನ ಸಂರಕ್ಷಣೆಗೆ ಜೀವತೆತ್ತ  ವೀರ ವನಿತೆ ಒನಕೆ ಓಬವ್ವ ಪುಷ್ಪಾರ್ಚನೆ ಮಾಡುವ ಮೂಲಕ ನಾಡಿನ ಜನರ ಭಾವನೆಗಳಿಗೆ ಗೌರವ ಸಲ್ಲಿಸಿದ್ದಾರೆ. ಬೆಂಗಳೂರು, ಮೈಸೂರು ಚೆನ್ನೈಯನ್ನು ಸಂಪರ್ಕಿಸುವ ವಂದೇ ಭಾರತ ರೈಲಿಗೆ  ಹಸಿರು ನಿಶಾನೆ ತೋರಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದ ಟರ್ಮಿನಲ್ 2 ಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇದಕ್ಕಾಗಿ ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ  ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ನಾಡಪ್ರಭು ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗದ ದರ್ಶನವನ್ನು ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಮಾಡಿಸಿದ್ದಾರೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಇಂದು ಅಂತರರಾಷ್ಟ್ರೀಯ ನಗರವಾಗಿ ಬೆಳೆದಿದೆ. ಯೋಜನಾಬದ್ಧ ನಗರ ನಿರ್ಮಿಸಿ,  ಹಲವು ಕೆರೆಕಟ್ಟೆಗಳು, ಪೇಟೆಗಳನ್ನು ನಿರ್ಮಿಸುವ ಮೂಲಕ ಜನ ನೆಮ್ಮದಿಯ ಜೀವನ ಬದುಕುವಂತೆ ಮಾಡಿದ್ದಾರೆ. ನಾಡಪ್ರಭು. ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮುಖಾಂತರ ನಾಡಿನ ಸಂಸ್ಕೃತಿ, ಇತಿಹಾಸ ಪರಂಪರೆ, ಪ್ರಗತಿಪರ ಚಿಂತನೆಗೆ ಗೌರವ ಸಲ್ಲಿಸಿದಂತಾಗಿದೆ. ಗುಜರಾತಿನಲ್ಲಿ  ಏಕತೆಯ ಪ್ರತಿಮೆಯಿದ್ದರೆ, ರಾಜ್ಯದ ಸರದಾರ ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆಧುನಿಕ ಭಾರತದ ವಿಕಾಸ ಪುರುಷರು. ದೇಶದ ಹತ್ತುಹಲವಾರು ಸವಾಲುಗಳನ್ನು ಬಗೆಹರಿಸಿ ಬಲಿಷ್ಟ ಭಾರತವನ್ನು ಕಟ್ಟಿ, ಆತ್ಮನಿರ್ಭರ  ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಅಭಿವೃದ್ಧಿಯಲ್ಲಿ ಎಲ್ಲರಿಗೂ ಅವಕಾಶ ಕೊಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದದಾರೆ.  ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿತವಿದ್ದ ಸಂದರ್ಭದಲ್ಲಿ  ಭಾರತ ಆರ್ಥಿಕವಾಗಿ ಬಲಿಷ್ಟಗೊಳ್ಳುತ್ತಿದ್ದರೆ, ಅದಕ್ಕೆ ಪ್ರಧಾನಿ ಮೋದಿಯವರ ಯೋಜನೆಗಳೇ ಕಾರಣ.ಒಬ್ಬ ವಿಕಾಸಪುರುಷ ದಾರಿಯಲ್ಲಿ ನವಭಾರತ ನಿರ್ಮಾಣ ಮಾಡುತ್ತಿರುವವರ ಕೈಯಿಂದ ಕೇಂಪೇಗೌಡರ ಮೂರ್ತಿ ಅನಾವರಣ ಮಾಡಿರುವುದು ದೈವೇಚ್ಛೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಡಾ.ಸಿ ಎನ್. ಅಶ್ವತ್ಥ ನಾರಾಯಣ, ಡಾ.ಕೆ. ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.

Join Whatsapp