ಬೆಂಗಳೂರು: ‘ದೂರದ ದೇಶದಿಂದ ನೇರ ಇಲ್ಲಿಗೆ ಬಂದೆ. ಭಾರತದ ಸೂರ್ಯೋದಯವಾಗುತ್ತಿರುವ ಈ ಹೊತ್ತಿನಲ್ಲಿ ಆ ಬೆಳಕಿನಲ್ಲಿ ನಾನು ಬೆಂಗಳೂರಿಗರ ಮುಖ ನೋಡಿದೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ಬಹಳ ಸಂತಸವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದ ಅವರು, ಹೆಚ್ಎಎಲ್ ಏರ್ಪೋರ್ಟ್ ಹೊರಭಾಗದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಮೋದಿ ಅವರು ಮಾತನಾಡು ಆರಂಭಿಸುತ್ತಿದ್ದಂತೆಯೇ, ಅಭಿಮಾನಿಗಳು ‘ಜೈ ಮೋದಿ’ ಘೋಷಣೆ ಕೂಗಲು ಮುಂದಾದರು. ತಕ್ಷಣವೇ ಅದನ್ನು ತಡೆದ ಮೋದಿ, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್’ ಎಂಬ ಘೋಷಣೆ ಕೂಗುವಂತೆ ಮನವಿ ಮಾಡಿದರು.
ನಮ್ಮ ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನಮ್ಮ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋಗೆ ಭೇಟಿ ನೀಡಲು ನಿರ್ಧರಿಸಿದ್ದೆ. ಹಾಗಾಗಿ ವಿದೇಶದಿಂದ ನೇರವಾಗಿ ವಿಜ್ಞಾನಿಗಳ ಭೇಟಿಗಾಗಿ ಇಲ್ಲಿಗೆ ಬಂದಿದ್ದೇನೆ. ಇಸ್ರೋ ಕಚೇರಿಗೆ ತೆರಳಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.
ಸಿಎಂ, ಡಿಸಿಎಂ, ರಾಜ್ಯಪಾಲರಿಗೆ ಧನ್ಯವಾದ
ವಿದೇಶದಲ್ಲಿರುವಾಗ ಅಲ್ಲಿಂದ ನೇರ ಬೆಂಗಳೂರಿಗೆ ಬರಲು ನಿರ್ಧರಿಸಿದೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ನಾನು ಮನವಿ ಮಾಡಿದ್ದೆ. ಅದಕ್ಕೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಪ್ರೋಟೋಕಾಲ್ ವ್ಯವಸ್ಥೆ ಮಾಡಿದ ಅವರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇನೆ ಎಂದು ಮೋದಿ ಹೇಳಿದರು. ನಂತರ ಇಸ್ರೋ ಪ್ರಧಾನ ಕಚೇರಿಯತ್ತ ನಿರ್ಗಮಿಸಿದರು.