ಒಡೆದು ಹೋಗಿರುವ ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುವುದರಲ್ಲಿ ಕ್ರೀಡೆಯು ವಹಿಸುವ ಪಾತ್ರ ಬಹಳ ದೊಡ್ಡದು. ಎಲ್ಲಾ ಕ್ಷೇತ್ರಗಳಲ್ಲೂ ಕೋಮುವಾದವು ತನ್ನ ಕದಂಬ ಬಾಹುಗಳನ್ನು ಚಾಚುತ್ತಿರುವ ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರವು ಅಪವಿತ್ರಗೊಂಡಿಲ್ಲ ಎಂಬುದು ಮತ್ತೊಮ್ಮೆ ನಿರೂಪಿತವಾಗಿದೆ. ಫುಟ್ಬಾಲ್ ಪಂದ್ಯಾಟ ನಡೆಯುತ್ತಿರುವ ವೇಳೆ, ಆಟಗಾರನೋರ್ವನಿಗೆ ಉಪವಾಸ ತೊರೆಯಲು (ಇಫ್ತಾರ್), ಪಂದ್ಯದ ರೆಫ್ರಿ, ಕೆಲಕಾಲ ಪಂದ್ಯವನ್ನೇ ಮುಂದೂಡಿದ ಅಪರೂಪದ ಕ್ಷಣಕ್ಕೆ ಜರ್ಮನ್ ಫುಟ್ಬಾಲ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಜರ್ಮನಿಯ ರಾಷ್ಟ್ರೀಯ ಫುಟ್ಬಾಲ್ ಲೀಗ್ ಬುಂಡಸ್ಲೀಗಾದ ಇತಿಹಾದಲ್ಲಿಯೇ ಇದೇ ಮೊದಲ ಬಾರಿಗೆ ಆಟಗಾರನೋರ್ವನಿಗೆ ಉಪವಾಸ ತೊರೆಯಲು ಪಂದ್ಯವನ್ನು ಕೆಲೆಕಾಲ ಸ್ಥಗಿತಗೊಳಿಸಲಾಗಿದೆ. ಬುಂಡಸ್ಲೀಗಾದ ಐಸ್ಬರ್ಗ್ ಮತ್ತು ಮೈನ್ಝ್ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವ ವೇಳೆ 65ನೇ ನಿಮಿಷದಲ್ಲಿ ರೆಫ್ರಿ ಮಥಿಯಾಸ್ ಜೊಲೆನ್ಬೆಕ್, ಮೈನ್ಝ್ ತಂಡದ ರಕ್ಷಣಾ ವಿಭಾಗದ ಆಟಗಾರ ಮೂಸಾ ನಿಯಾಕಥ್ಗೆ ಉಪವಾಸ ತೊರೆಯಲು ಅವಕಾಶ ಮಾಡಿಕೊಟ್ಟರು. ಈ ವೇಳೆ ಗೋಲ್ ಕೀಪರ್ ಬಳಿ ತೆರಳಿದ ಮೂಸಾ, ನೀರು ಕುಡಿದು ಉಪವಾಸ ತೊರೆದರು. ಸ್ವಲ್ಪ ಹೊತ್ತಿನ ಬಳಿಕ ಪಂದ್ಯ ಮತ್ತೆ ಮುಂದುವರಿಯಿತು. ಇಫ್ತಾರ್ಗಾಗಿ ಅವಕಾಶ ಮಾಡಿಕೊಟ್ಟ ರೆಫ್ರಿ ಬಳಿ ತೆರಳಿದ ಮೂಸಾ, ಧನ್ಯವಾದ ಸಲ್ಲಿಸಿದರು.
ಇದಾದ ನಂತರದಲ್ಲಿ ಬುಂಡಸ್ಲೀಗಾದ ನಡೆದ ಮತ್ತೊಂದು ಪಂದ್ಯದಲ್ಲೂ ಸಮಾನಾಂತರವಾದ ಘಟನೆ ನಡೆದಿದೆ. ಆರ್ಪಿ ಲಿಪ್ಝಿಗ್ ಮತ್ತು ಹೊಫಿನ್ಹೈಮ್ ತಂಡಗಳ ನಡುವಿನ ಪಂದ್ಯದಲ್ಲೂ, ಲಿಪ್ಝಿಗ್ ಆಟಗಾರ ಮುಹಮ್ಮದ್ ಸಿಮಕಾನ್ ಉಪವಾಸ ತೊರೆಯಲು, ರೆಫ್ರಿ ಬಸ್ತಿಯಾನ್ ಡ್ಯಾನ್ಕರ್ಟ್ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಿದ್ದರು.
ಕಳೆದ ವರ್ಷ ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಿಸೆಸ್ಟರ್ ಸಿಟಿ ಮತ್ತು ಕ್ರಿಸ್ಟಲ್ ಪ್ಯಾಲೇಸ್ ನಡುವಿನ ಪಂದ್ಯದಲ್ಲೂ ರೆಫ್ರಿ ಗ್ರಹಾಮ್ ಸ್ಕಾಟ್ ಆಟಗಾರರಿಗೆ ಉಪವಾಸ ತೊರೆಯಲು ಅನುಕೂಲವಾಗುವಂತೆ ಪಂದ್ಯವನ್ನು ಕೆಲಕಾಲ ಮುಂದೂಡಿದ್ದರು.