ಐಪಿಎಲ್ 2022 | ಉಮ್ರಾನ್ ಮಲಿಕ್ ವೇಗಕ್ಕೆ ಕಿಂಗ್ಸ್ ಕಂಗಾಲು, ಹೈದರಾಬಾದ್ ತಂಡಕ್ಕೆ ಸತತ 4ನೇ ಗೆಲುವು

Prasthutha|

ಮುಂಬೈ: 15ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಗೆಲುವಿನ ನಾಗಾಲೋಟ ಮುಂದುವರಿದಿದೆ. ಭಾನುವಾರ, ಪಂಜಾಬ್‌ ಕಿಂಗ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕೇನ್‌ ವಿಲಿಯಮ್ಸನ್‌ ಪಡೆ, ಟೂರ್ನಿಯಲ್ಲಿ  ಸತತ ನಾಲ್ಕನೇ ಜಯ ಸಾಧಿಸುವ ಮೂಲಕ  ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

- Advertisement -

ಡಿವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌, 151 ರನ್‌ಗಳಿಗೆ ಆಲೌಟ್‌ ಆಗಿತ್ತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್‌, 18.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟದಲ್ಲಿ ಗೆಲುವಿನ ಗುರಿ ತಲುಪಿತು. ಹೈದರಾಬಾದ್‌, ಆರಂಭದಲ್ಲೇ ನಾಯಕ ಕೇನ್ ವಿಲಿಯಮ್ಸನ್ (3) ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಕೆಯ ಅಟವಾಡಿತು. ಆರಂಭಿಕ ಅಭಿಷೇಕ್‌ ಶರ್ಮಾ 31, ರಾಹುಲ್‌ ತ್ರಿಪಾಠಿ 34, ಏಡೆನ್‌ ಮಾರ್ಕಮ್‌ 41 ಹಾಗೂ ಕೀಪರ್‌ ನಿಕೊಲಸ್‌ ಪೂರನ್‌ 35 ರನ್‌ಗಳಿಸಿದರು.

ಟೂರ್ನಿಯಲ್ಲಿ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಸನ್‌ರೈಸರ್ಸ್ ಹೈದರಾಬಾದ್‌, ನಂತರದ 4 ಪಂದ್ಯಗಳಲ್ಲೂ ಭಾರಿ ಅಂತರದಲ್ಲಿ ಸತತವಾಗಿ ಗೆಲುವು ದಾಖಲಿಸಿದೆ. ಅದರಲ್ಲೂ 4 ಪಂದ್ಯಗಳಲ್ಲೂ ಗುರಿ ಬೆನ್ನತ್ತಿ ವಿಲಿಯಮ್ಸನ್‌ ಪಡೆ ಗೆದ್ದು ಬೀಗಿರುವುದು ವಿಶೇಷ.

- Advertisement -

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌, ಉಮ್ರಾನ್‌ ಮಲಿಕ್‌ ಮತ್ತು ಅನುಭವಿ ಭುವನೇಶ್ವರ್‌ ಕುಮಾರ್‌ ವೇಗದ ಬೌಲಿಂಗ್‌ ದಾಳಿಗೆ ಸಿಲುಕಿ 151ರನ್‌ ಗಳಿಗೆ ತನ್ನ ಇನ್ನಿಂಗ್ಸ್‌ ಮುಗಿಸಿತ್ತು. 22 ರನ್‌ ನೀಡಿ ಭುವಿ 3  ವಿಕೆಟ್‌ ಪಡೆದರೆ, 28 ರನ್‌ ನೀಡಿ ಮಲಿಕ್‌ 4 ವಿಕೆಟ್‌ ಪಡೆದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಉಮ್ರಾನ್‌ ಮಲಿಕ್‌ ಪಾಲಾಯಿತು. ಇನ್ನಿಂಗ್ಸ್‌ನ ಅಂತಿಮ ಓವರ್‌ ಎಸೆದ ಉಮ್ರಾನ್‌ ಮಲಿಕ್‌, ಯಾವುದೇ ರನ್‌ ನೀಡದೆ 3 ವಿಕೆಟ್‌ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದರು.  

ಪಾದದ ನೋವಿನಿಂದ ಮಯಾಂಕ್‌ ಅಗರ್ವಾಲ್‌ ಪಂದ್ಯದಿಂದ ಹೊರಗುಳಿದ ಕಾರಣ ಪಂಜಾಬ್‌ ತಂಡವನ್ನು ಶಿಖರ್‌ ಧವನ್‌ ಮುನ್ನಡೆಸಿದ್ದರು. ಆರಂಭಿಕರಾದ ಧವನ್‌ (8), ಪ್ರಭಾಸಿಮ್ರಾನ್‌ ಸಿಂಗ್‌ (14) ಮತ್ತು ಮೂರನೇ ಕ್ರಮಾಂಕದಲ್ಲ್ಲಿ ಬಂದ ಜಾನಿ ಬೇರ್‌ಸ್ಟೋ 12 ರನ್‌ಗಳಿಸುವಷ್ಟರಲ್ಲೇ ಪೆವಿಲಿಯನ್‌ಗೆ ಮರಳಿದರು. ಬಳಿಕ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಲಿಯಾಮ್‌ ಲಿವಿಂಗ್‌ಸ್ಟನ್‌ 33 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು 5 ಬೌಂಡರಿಗಳ ನೆರವಿನಿಂದ  60 ರನ್‌ಗಳಿಸಿ ಪಂಜಾಬ್‌ಗೆ ಆಸರೆಯಾದರು. ಕೊನೆಯಲ್ಲಿ ಶಾರೂಖ್‌ ಖಾನ್‌ 26 ಮತ್ತು ಒಡಿಯನ್‌ ಸ್ಮಿತ್‌ 13 ರನ್‌ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಪಂಜಾಬ್ ಕಿಂಗ್ಸ್ ಪರ ಲೆಗ್ ಸ್ಪಿನ್ನರ್ ರಾಹುಲ್ ಚಹರ್ (28ಕ್ಕೆ 2) ಎರಡು ವಿಕೆಟ್ ಕಿತ್ತು ಗಮನ ಸೆಳೆದರು.

Join Whatsapp