ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಪ್ಲಾಸ್ಮಾ ದಂಧೆ: ದಾನ ಮಾಡಲಾದ ಪ್ಲಾಸ್ಮಾ ದುಬಾರಿ ಬೆಲೆಗೆ ಮಾರಾಟ : ಎಸ್.ಡಿ.ಪಿ.ಐ ಹೋರಾಟದ ಎಚ್ಚರಿಕೆ

Prasthutha|

►► ವೆನ್ಲಾಕ್ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ಯಂತ್ರ ಬಳಕೆಯಿಲ್ಲ

- Advertisement -

►►ದಂಧೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಭಾಗಿ

ಮಂಗಳೂರು:- ಜಿಲ್ಲೆಯಲ್ಲಿ ದಿನನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಕಾಯಿಲೆ ಪೀಡಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳ ಮೂಲಕ ದಾನಿಗಳು ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಆದರೆ ಖಾಸಗೀ ಆಸ್ಪತ್ರೆಯೊಂದು ಇದನ್ನೇ ದಂಧೆಯನ್ನಾಗಿಸಿದ್ದು ದುಬಾರಿ ಬೆಲೆಗೆ ಮಾರುವ ಮೂಲಕ ಬಡ ರೋಗಿಗಳನ್ನು ಶೋಷಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

“ದಾನಿಗಳಿಂದ ಪ್ಲಾಸ್ಮಾ ಸಂಗ್ರಹಿಸಿದ ಬಳಿಕ Apheresis ಎಂಬ ಯಂತ್ರದಲ್ಲಿ ಅದನ್ನು ವರ್ಗೀಕರಣ ಮಾಡಿ ರೋಗಿಗಳಿಗೆ ನೀಡಲಾಗುತ್ತದೆ. ಆದರೆ ಈ ಪ್ರಕ್ರಿಯೆಗಾಗಿ ಸರ್ಕಾರ ಜಿಲ್ಲೆಯಲ್ಲಿ ಕೇವಲ ಒಂದು ಖಾಸಗಿ ಆಸ್ಪತ್ರೆಗೆ ಅನುಮೋದನೆಯನ್ನು ನೀಡಿದೆ. ವಾಸ್ತವದಲ್ಲಿ ಈ ಯಂತ್ರವು ಜಿಲ್ಲಾ ಸರ್ಕಾರಿ ಆಸ್ಪತ್ರೆಯಾದ ವೆನ್ಲಾಕ್ ನಲ್ಲಿದ್ದರೂ ಅದನ್ನು ಇದುವರೆಗೂ ಬಳಸದಿರುವುದು ವಿಪರ್ಯಾಸ. ಇದರ ಹಿಂದೆ ಷಡ್ಯಂತರವಿದ್ದು, ಸ್ಥಳೀಯ ಬಿಜೆಪಿ ಶಾಸಕರ ಕೈವಾಡವು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕ್ರಿಯೆಯ ಬಳಿಕ ಸಂಬಂಧಿಸಿದ ಖಾಸಗಿ ಆಸ್ಪತ್ರೆಯು ಮನಬಂದಂತೆ ದರ ವಿಧಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

“ದಾನಿಗಳು ಉಚಿತವಾಗಿ ನೀಡಿದ ಪ್ಲಾಸ್ಮಾವನ್ನು ಈ ಖಾಸಗಿ ಆಸ್ಫತ್ರೆಗಳು ₹9000 ದಿಂದ ₹19000 ತನಕ ದರ ವಿಧಿಸಿ ಮಾರಾಟ ಮಾಡುತ್ತಿವೆ. ಈ ಯಂತ್ರವು ಸರ್ಕಾರಿ ಆಸ್ಫತ್ರೆಗೆ ಮಂಜೂರಾಗಿದ್ದರೂ ಅದನ್ನು ಬಳಕೆ ಮಾಡಲು ಅನಮೋದಿಸದೆ ಇರುವುದು ಅಕ್ಷಮ್ಯ ಮತ್ತು ಅಕ್ರಮವಾಗಿದೆ” ಎಂದು ಅವರು ಆಕ್ಷೇಪಿಸಿದ್ದಾರೆ.

“ಮೈಸೂರು ಹಾಗು ಇನ್ನಿತರ ಕೆಲವು ಜಿಲ್ಲೆಗಳ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಪ್ಲಾಸ್ಮಾ ವರ್ಗೀಕರಣಕ್ಕೆ ₹5000 ಗಿಂತಲೂ ಕಡಿಮೆ ಹಣವನ್ನು ವಿಧಿಸಲಾಗುತ್ತದೆ.  ಪ್ರಸ್ತುತ ಕೊರೊನಾ ಲಾಕ್ ಡೌನ್ ನಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲಿ ಮಂಗಳೂರಿನ ಖಾಸಗಿ ಆಸ್ಫತ್ರೆಯು ಬೇಕಾಬಿಟ್ಟಿ ದರ ನಿಗದಿ ಮಾಡಿ ಬಡವರನ್ನು ದೋಚುತ್ತಿರುವುದನ್ನು ಕಂಡು ಸುಮ್ಮನಿರಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

“ಜಿಲ್ಲಾಡಳಿತ ಕೂಡಲೇ ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು. ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ವರ್ಗೀಕರಿಸುವ Apheresis ಯಂತ್ರವನ್ನು ಬಳಸಿ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ದೊರಕಿಸಿಕೊಡಬೇಕು. ಇಲ್ಲದಿದ್ದರೆ ಎಸ್.ಡಿ.ಪಿ.ಐ ಈ ಅಕ್ರಮದ  ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕಾದೀತು” ಎಂದು ಅಥಾವುಲ್ಲ ಎಚ್ಚರಿಸಿದ್ದಾರೆ.

Join Whatsapp